ಉಡುಪಿ: ನೌಕಾಪಡೆ ಮೀನುಗಾರರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸದಿದ್ದರೆ ಸುಪ್ರಿಂ ಕೋರ್ಟ್ ಮೆಟ್ಟಿಲೇರಲು ಸಿದ್ದ. ಮಾತ್ರವಲ್ಲದೆ ಅಗತ್ಯ ಬಿದ್ದರೆ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ವಿರುದ್ದವೂ ಪ್ರಕರಣ ದಾಖಲಿಸುತ್ತೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಎಚ್ಚರಿಕೆ ನೀಡಿದರು.. ಇಂದು ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೌಕಾಪಡೆಯ ಐಎನ್ಎಸ್ ಕೊಚ್ಚಿನ್ ಹಡಗು ಡಿಕ್ಕಿ ಹೊಡೆದ ಪರಿಣಾಮವೇ ಸುವರ್ಣ ತ್ರಿಭುಜ ಬೋಟ್ ಸಮುದ್ರದಲ್ಲಿ ಮುಳುಗಿದ್ದು. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ಇದನ್ನು ಮುಚ್ಚಿಡಲಾಗಿದೆ. ನೌಕಾಸೇನೆಯವರು ಮೃತ 7 ಮೀನುಗಾರರ ಕುಟುಂಬಕ್ಕೆ ಕನಿಷ್ಠ 25 ಲಕ್ಷ ರೂಪಾಯಿ ಪರಿಹಾರ ನೀಡಬೇಕು. ಅಲ್ಲದೆ ಸುವರ್ಣ ತ್ರಿಭುಜ ಮೀನುಗಾರಿಕೆ ದೋಣಿಯ ಇನ್ಯುರೆನ್ಸ್ ಕ್ಲೇಮ್ ಬಳಿಕದ ಬಾಕಿ ಉಳಿದ ಪರಿಹಾರವನ್ನು ನೌಕಸೇನೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಒಂದು ವೇಳೆ ಪರಿಹಾರ ಹಾಗೂ ತಪ್ಪೊಪ್ಪಿಕೊಳ್ಳುವಲ್ಲಿ ನೌಕಸೇನೆ ಹಿಂದೇಟು ಹಾಕಿದರೆ ಸುಪ್ರೀಂ ಮೆಟ್ಟಿಲೇರಿ, ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಆಗ್ರಹಿಸುತ್ತೇನೆ. ಈ ಪ್ರಕರಣದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಕೂಡಾ ಜವಾಬ್ದಾರರಾಗಿದ್ದು, ರಕ್ಷಣೆ ಸಚಿವೆ ಕಾನೂನಿಗಿಂತ ದೊಡ್ಡವರಲ್ಲ ಹೀಗಾಗಿ ಅವರ ವಿರುದ್ದ ಪ್ರಕರಣ ದಾಖಲಿಸಲು ಸಿದ್ದ ಎಂದು ಗುಡುಗಿದ್ದಾರೆ.