ಉಡುಪಿ: ಮಲ್ಪೆ ಪಡುಕೆರೆ ಮೀನುಗಾರಿಕಾ ಬೋಟಿನಲ್ಲಿ ಕಾರ್ಮಿಕನ ಕೊಲೆ; ಆರೋಪಿ ಪೊಲೀಸರು ವಶಕ್ಕೆ.!

ಉಡುಪಿ: ಮಲ್ಪೆ ಪಡುಕೆರೆ ದಕ್ಕೆಯಲ್ಲಿ ಬೋಟಿನಲ್ಲಿ ನಡೆದ ಗಲಾಟೆ ವೇಳೆ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಕೊಲೆಯಾದವರನ್ನು ಅಭಿಷೇಕ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಿಂದ ಎಂಬಾತನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ ಬೋಟಿನಲ್ಲಿ ಗೋವಿಂದ ಮತ್ತು ಅಭಿಷೇಕ್ ನಡುವೆ ಗಲಾಟೆ ನಡೆದಿತ್ತು. ಮಂಗಳವಾರ ಬೆಳಗಿನ ಜಾವ ಗೋವಿಂದ ಅಭಿಷೇಕ್‌ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಹಿತಿ ಪಡೆದ ತಕ್ಷಣ ಮಲ್ಪೆ ಪೊಲೀಸ್ ಠಾಣೆಯ ಉಪನಿರೀಕ್ಷಕ (ಕಾ.ಸು.) ಅನಿಲ್ ಕುಮಾರ್ ಡಿ. ಅವರು ಸಿಬ್ಬಂದಿ ಹೆಚ್‌ಸಿ ಆದರ್ಶ ಮತ್ತು ಪಿಸಿ ಕುಬೇರ ಅವರೊಂದಿಗೆ ಆರೋಪಿ ಪತ್ತೆಗೆ ಕಾರ್ಯಾಚರಣೆ ನಡೆಸಿದರು. ಉಡುಪಿಗೆ ತೆರಳಿ ರೈಲು ನಿಲ್ದಾಣದ ಬಳಿ ಹೈದರಾಬಾದ್ ಅಥವಾ ಮುಂಬೈ ಕಡೆಗೆ ತೆರಳಲು ಮುಂದಾಗಿದ್ದ ಗೋವಿಂದನನ್ನು ವಶಕ್ಕೆ ಪಡೆಯಲಾಯಿತು.
ವಿಚಾರಣೆ ವೇಳೆ ಗೋವಿಂದ ಸುಮಾರು 15 ವರ್ಷಗಳಿಂದ ಮನೆಗೆ ತೆರಳದೆ ಮುಂಬೈ, ಹೈದರಾಬಾದ್ ಸೇರಿದಂತೆ ವಿವಿಧೆಡೆ ಕೆಲಸ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.
ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.