ಉಡುಪಿ: ಕೋವಿಡ್–19 (ಕೊರೊನಾ) ವೈರಸ್‌ನ ಪರಿಣಾಮ ಮೀನುಗಾರಿಕೆಯ ಮೇಲೆ ಅಷ್ಟಾಗಿ ಬೀರಿಲ್ಲ. ಆದರೆ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಮೀನಿನಲ್ಲಿ ಕೊರೊನಾ ವೈರಸ್ ಇದೆಯೆಂದು ಅಪಪ್ರಚಾರ ಮಾಡಲಾಗುತ್ತಿದೆ. ವದಂತಿ ಹಬ್ಬಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಲ್ಪೆ ಮಿನುಗಾರರ ಸಂಘದ ಅಧ್ಯಕ್ಷ ಕೃಷ್ಣ ಎಸ್.
ಸುವರ್ಣ ಒತ್ತಾಯಿಸಿದ್ದಾರೆ.
ಮಲ್ಪೆ ಬಂದರಿನಲ್ಲಿ ಮಂಗಳವಾರ ಪತ್ರಿಕಾ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಮಲ್ಪೆ ಬಂದರಿನಲ್ಲಿ ಎಂದಿನಂತೆ ವಹಿವಾಟು ನಡೆಯುತ್ತಿದ್ದು, ಗ್ರಾಹಕರ ಸಂಖ್ಯೆಯಲ್ಲಿಯೂ ಯಾವುದೇ ಕೊರತೆ ಎದುರಾಗಿಲ್ಲ. ಬೇರೆ ಜಿಲ್ಲೆ ಹಾಗೂ ರಾಜ್ಯಗಳಿಗೂ ಮೀನು ರಫ್ತಾಗುತ್ತಿದೆ. ಮಾರುಕಟ್ಟೆಗಳಿಗೂ ಮೀನು ಸಾಗಾಟವಾಗುತ್ತಿದೆ. ಆದರೆ ವದಂತಿಯಿಂದ ಮಾರುಕಟ್ಟೆಯಲ್ಲಿ ಮೀನು ಖರೀದಿಸುವ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ ಎಂದು ತಿಳಿಸಿದರು.
ವದಂತಿಗೆ ಕಿವಿಗೊಡಬೇಡಿ:
ಮೀನುಗಳು ಸಮುದ್ರ ಆಳದಲ್ಲಿ ದೊರೆಯುವುದರಿಂದ ಇವುಗಳಿಗೆ ಯಾವುದೇ ಸೋಂಕು ತಗಲುವ ಸಾಧ್ಯತೆ ಕಡಿಮೆ. ಅಲ್ಲದೆ ತರಕಾರಿ, ಕೋಳಿ, ಕುರಿಗಳಂತೆ ಇವುಗಳಿಗೆ ಯಾವುದೇ ರಾಸಾಯನಿಕವನ್ನು ಕೊಟ್ಟು ಬೆಳೆಸುವುದಿಲ್ಲ. ಹಿಂದೆ ಮೀನಿನಲ್ಲಿ ರಾಸಾಯನಿಕ ಬೆರೆಸುತ್ತಾರೆಂಬ ವದಂತಿ ಹಬ್ಬಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೀನುಗಳ ಮಾದರಿಯನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ವರದಿಯಲ್ಲಿ ನೆಗೆಟಿವ್ ಬಂದಿದೆ.
ಅಲ್ಲದೆ ಮೀನುಗಾರಿಕೆ ಇಲಾಖೆ ಬಂದರಿನಲ್ಲಿಯೇ ಮೀನಿನ ಪರೀಕ್ಷೆ ನಡೆಸಿದ್ದು, ಅದರಲ್ಲಿಯೂ ನೆಗೆಟಿವ್ ಅಂಶ ಬಂದಿದೆ. ಹಾಗಾಗಿ ಜನರು ನಿರ್ಭಿತಿಯಿಂದ ಮೀನು ಸೇವನೆ ಮಾಡಬಹುದು. ಯಾವುದೇ ವದಂತಿಗೆ ಕಿವಿಗೊಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ಮೀನುಗಾರಿಕೆ ಶೇ. 80ರಷ್ಟು ನಷ್ಟದಲ್ಲಿದೆ. ಮೀನುಗಾರಿಕೆ ಕುಂಠಿತದಿಂದ ಶೇ. 35ರಷ್ಟು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿದ್ದು, ಅದರಲ್ಲಿ ಪರ್ಸಿನ್, 370, ಬೇಸಿಗೆ ನಾಡದೋಣಿ ಹಾಗೂ ಆಳಸಮುದ್ರ ಬೋಟ್‌ಗಳು ಸೇರಿವೆ ಎಂದರು.
ಬಂದರಿನಲ್ಲಿ ಕೊರೊನಾ ಜಾಗೃತಿ:
ಮಲ್ಪೆ ಮೀನುಗಾರರ ಸಂಘ ಹಾಗೂ ಮೀನುಗಾರಿಕೆ ಇಲಾಖೆ ಜಂಟಿಯಾಗಿ ಈಗಾಗಲೇ ಕೊರೊನಾ ಸೋಂಕಿನ ಬಗ್ಗೆ ಬಂದರಿನಲ್ಲಿ ಮೀನುಗಾರರಿಗೆ ಜಾಗೃತಿ ಮಾಡಿಸಲಾಗಿದ್ದು, ರೋಗದ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಲಾಗಿದೆ. ಈಗ ಮತ್ತೆ ಬಂದರಿನಲ್ಲಿ ಬ್ಯಾನರ್ ಅಳವಡಿಸುವುದು ಹಾಗೂ ಮೀನುಗಾರರಿಗೆ, ಗ್ರಾಹಕರಿಗೆ ಕರಪತ್ರ
ಹಂಚಿಕೆ ಮಾಡಲು ನಿರ್ಧರಿಸಿದೆ ಎಂದು ಮಾಹಿತಿ ನೀಡಿದರು.
ಕೇರಳ ಬಂದರಿಗೆ ಹೋಗಬೇಡಿ:
ಕೇರಳದಲ್ಲಿ ಕೊರೊನಾ ಸೋಂಕು ಪತ್ತೆಯಾದಾಗಲೇ ಕೇರಳಕ್ಕೆ ಹೋಗದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕೇರಳದ ಬಂದರಿನಲ್ಲಿ ಬೋಟ್ ನಿಲ್ಲಿಸದಂತೆ ತಿಳಿಸಲಾಗಿದೆ. ಕೇರಳದ ಬೋಟ್‌ಗಳು ಬಂದರೂ ಒಂದು ಕಿ.ಮೀ ದೂರದಿಂದಲೇ ಅವರೊಂದಿಗೆ ವಯರ್‌ಲೆಸ್ ಮೂಲಕ ಸಂವಹನ ನಡೆಸಬೇಕು ಎಂಬಂತಹ ಮುನ್ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮಲ್ಪೆ ಬಂದರಿನಲ್ಲಿ 1800 ಯಾಂತ್ರೀಕೃತ ಬೋಟ್‌ಗಳಿವೆ. ಅದರಲ್ಲಿ ಒಂದು ಸಾವಿರ ಆಳಸಮುದ್ರ ಬೋಟ್‌ಗಳು, 150 ಪರ್ಸಿನ್, 250 ಸಣ್ಣ ಟ್ರಾಲ್‌ಬೋಟ್, 450ರಿಂದ 500ರಷ್ಟು 370 ಬೋಟ್ ಹಾಗೂ 400 ಬೇಸಿಗೆ ನಾಡದೋಣಿಗಳಿವೆ. ಸುಮಾರು 1500ರಿಂದ 2 ಸಾವಿರ ಮಹಿಳಾ ಮೀನು ಮಾರಾಟಗಾರರಿದ್ದಾರೆ ಎಂದು ತಿಳಿಸಿದರು.
ಕರರಹಿತ ಡೀಸೆಲ್ ದರ ಇಳಿಸಿ:
ಕೊರೊನಾ ಭೀತಿಯಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿದಿದೆ. ಆದರೆ ರಾಜ್ಯ ಸರ್ಕಾರದಿಂದ ಬರುವ ಕರರಹಿತ ಡೀಸೆಲ್ ದರದಲ್ಲಿ ಕಡಿಮೆ ಆಗಿಲ್ಲ. ಹಿಂದಿನ ದರದಲ್ಲಿಯೇ ಮೀನುಗಾರರು ಡೀಸೆಲ್ ಖರೀದಿಸುತ್ತಿದ್ದು, ತೈಲ ಬೆಲೆ ಇಳಿಕೆಯ ಲಾಭ ಮೀನುಗಾರರಿಗೆ ಸಿಗುತ್ತಿಲ್ಲ. ಇದು ಸಂಕಷ್ಟದಲ್ಲಿರುವ ಮೀನುಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಟೀಕಿಸಿದ್ದಾರೆ.
ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್ ಮೆಂಡನ್, ಕೋಶಾಧಿಕಾರಿ ಶಿವಾನಂದ ಕುಂದರ್ ಇದ್ದರು.