ಮಲ್ಪೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ಮಲ್ಪೆ ವಲಯದ 14 ಒಕ್ಕೂಟಗಳ ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ಕಾರ್ಯಾಗಾರವನ್ನು ತೆಂಕನಿಡಿಯೂರು ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಮಾತನಾಡಿದ ಮಲ್ಪೆ ಪೋಲೀಸ್ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ಸಕ್ತಿವೇಲು ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರಲ್ಲಿ ನಾಯಕತ್ವ ಗುಣ ಬೆಳೆಸಲು ಸಹಕಾರಿಯಾಗಿದೆ. ಸಮಾಜದ ಎಲ್ಲ ವರ್ಗದ ಮಹಿಳೆಯರಿಗೆ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡುವುದರ ಮೂಲಕ ಅವರ ಸರ್ವಾಂಗೀಣ ಅಭಿವೃದ್ಧಿಗೂ ಪೂರಕವಾಗಿದೆ. ಅದೇ ರೀತಿ ಜನರು ಪೋಲೀಸ್ ಇಲಾಖೆಯ ಮೇಲೆ ಇರುವ ಭಯದ ವಾತಾವರಣ ಬಿಟ್ಟು, ಸಮಾಜದ ಒಳಿತಿಗೋಸ್ಕರ ಇಲಾಖೆಯ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದರು.

ತಾಲೂಕಿನ ಯೋಜನಾಧಿಕಾರಿ ಎಚ್. ರೋಹಿತ್ ಮಾತನಾಡಿ, ಪದಾಧಿಕಾರಿಗಳು ಯೋಜನೆಯ ಶಕ್ತಿಯಾಗಿ, ನಮ್ಮ ಒಕ್ಕೂಟದ ಸಂಘಗಳ ಬಲವರ್ಧನೆಗೆ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ 2020/21ನೇ ಸಾಲಿನ ಸಾಧಕ ಒಕ್ಕೂಟಗಳಿಗೆ ಅಭಿನಂದನಾಪತ್ರ ಪ್ರದಾನ ಮಾಡಲಾಯಿತು. ವಲಯ ಅಧ್ಯಕ್ಷೆ ಆಶಾಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕಿ ಮೂಕಾಂಬಿಕಾ ಸ್ವಾಗತಿಸಿದರು. ಸೇವಾಪ್ರತಿನಿಧಿ ಉಮಾ ವಂದಿಸಿದರು.

















