ಮಲ್ಪೆ ತೇಲುವ ಸೇತುವೆ: ಭಾರೀ ಗಾಳಿಯಿಂದ ರಕ್ಷಿಸಲು ಉದ್ದೇಶ ಪೂರ್ವಕ ಸಂಪರ್ಕ ಕಡಿತ?

ಉಡುಪಿ: ಮಲ್ಪೆ ಕಡಲತೀರದಲ್ಲಿ ರಾಜ್ಯದ ಪ್ರಪ್ರಥಮ ತೇಲುವ ಸೇತುವೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಗ್ಗೆ ಬಂದ ವರದಿಗಳನ್ನು ತಳ್ಳಿಹಾಕಿದ ಗುತ್ತಿಗೆದಾರ ಮತ್ತು ಡಯಲ್ ಮಂತ್ರದ ಮಾಲೀಕ ಸುದೇಶ್ ಶೆಟ್ಟಿ, ಸೇತುವೆಗಾಗುವ ಹಾನಿಯನ್ನು ತಪ್ಪಿಸಲು ಸೇತುವೆಯ ಸಂಪರ್ಕ ಕೊಂಡಿಗಳನ್ನು ತೆಗೆಯಲಾಗಿದೆ ಎಂದು ಹೇಳಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, “ಸೈಕ್ಲೋನ್ ಎಫೆಕ್ಟ್ ಮತ್ತು ಭಾರೀ ಗಾಳಿಯಿಂದಾಗಿ, ತೇಲುವ ಸೇತುವೆಗೆ ಯಾವುದೇ ಹಾನಿಯಾಗದಂತೆ ನಾವು ಸೇತುವೆಯ ಬೀಗಗಳ ಸಂಪರ್ಕವನ್ನು ತೆಗೆದಿದ್ದೇವೆ.

ಇದರಿಂದಾಗಿ ಇಂದು ಬೆಳಗ್ಗೆ ಸೇತುವೆಯ ಕೆಲವು ಬ್ಲಾಕ್‌ಗಳು ಸಮುದ್ರದಲ್ಲಿ ತೇಲುತ್ತಿದ್ದವು. ಸಾವು- ನೋವು ಸಂಭವಿಸಿದೆ ಎನ್ನುವ ವದಂತಿಗಳಿಗೆ ಜನರು ಕಿವಿಗೊಡುತ್ತಿದ್ದಾರೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ.ಯಾವುದೇ ಪ್ರಾಣಹಾನಿ ಅಥವಾ ಯಾರಿಗೂ ಹಾನಿಯಾಗಿಲ್ಲ ಎಂದು ನಾವು ದೃಢೀಕರಿಸುತ್ತೇವೆ.

ಪ್ರಸ್ತುತ, ಯಾವುದೇ ಜಲಕ್ರೀಡೆ ಚಟುವಟಿಕೆಗಳ ನಡೆಸದಿರುವ ಬಗ್ಗೆ ಜಿಲ್ಲಾಡಳಿತದ ಸೂಚನೆಯಿಂದಾಗಿ ತೇಲುವ ಸೇತುವೆಯನ್ನು ಮುಚ್ಚಲಾಗಿದೆ, ”ಎಂದರು.