ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಮಗುಚಿಬಿದ್ದ ನಾಡದೋಣಿ; ನಾಲ್ವರು ಮೀನುಗಾರರು ಅಪಾಯದಿಂದ ಪಾರು

ಉಡುಪಿ: ಸಮುದ್ರದ ಅಲೆಗಳ ಹೊಡೆತಕ್ಕೆ ದೋಣಿ ಮಗುಚಿ ಬಿದ್ದಿದ್ದು, ಏಡಿಬಲೆಗೆ ಹೋದ ನಾಲ್ವರು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಲ್ಪೆಯ ಸಮುದ್ರ ತೀರದ ತೊಟ್ಟಂ ಬಳಿ ಇಂದು ಮುಂಜಾನೆ ಸಂಭವಿಸಿದೆ.

ತೊಟ್ಟಂ ವಾರ್ಡಿನ ನಗರ ಸಭಾ ಸದಸ್ಯರಾದ ಯೋಗೇಶ್ ಅವರು ಈಶ್ವರ್ ಮಲ್ಪೆ ತಂಡಕ್ಕೆ ಮಾಹಿತಿ ನೀಡಿದ್ದು, ಸ್ಥಳಿಯರಾದ ಪ್ರವೀಣ್, ಉದಯ್ ಅವರ ಜೊತೆ ಸೇರಿ ಲೈಫ್ ಜಾಕೇಟ್ ನೀಡಿ ನಾಲ್ವರು ಮೀನುಗಾರರ ಜೀವ ರಕ್ಷಿಸಲಾಗಿದೆ ಎಂದು ಮುಳುಗು ತಜ್ಞ ಈಶ್ವ‌ರ್ ಮಲ್ಪೆ ತಿಳಿಸಿದ್ದಾರೆ.

ಜಿಲ್ಲೆಯಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಕಡಲು ಪ್ರಕ್ಷುಬ್ಧಗೊಂಡಿದ್ದು, ದೈತ್ಯ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈಜು ಬರುತ್ತದೆ ಎಂದು ಹೇಳಿ ಯಾರೂ ಸಹ ನೀರಿಗೆ ಇಳಿಯಬೇಡಿ. ಯಾವ ಕ್ಷಣದಲ್ಲೂ ಅಲೆಗಳು ಮೇಲುಕ್ಕಿ ಬರುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಎಲ್ಲಾ ಮೀನಿಗಾರರು ಲೈಫ್ ಜಾಕೇಟ್ ಹಾಕಿಯೇ ಮೀನುಗಾರಿಕೆಗೆ ಹೋಗಿ ಎಂದು ಈಶ್ವ‌ರ್ ಮಲ್ಪೆ ವಿನಂತಿಸಿದ್ದಾರೆ .