ಮಲ್ಪೆ ಬಂದರಿನ ದಕ್ಕೆಯ ನೀರಿಗೆ ಬಿದ್ದು ಕಾರ್ಮಿಕ ನೋರ್ವ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.
ಮಹಾರಾಷ್ಟ್ರ ರತ್ನಗಿರಿಯ ನಿವಾಸಿ ನಿತಿನ್ ಮೃತಪಟ್ಟ ಕಾರ್ಮಿಕ. ಈತ ಇತರ ಇಬ್ಬರು ಕಾರ್ಮಿಕರೊಂದಿಗೆ ಮಲ್ಪೆ ಬಂದರಿನಲ್ಲಿ ನಾಗಾರ್ಜುನ ಕಂಪೆನಿಯ ಪೈಪ್ ಲೈನ್ ಕಾಮಗಾರಿಯ ಕೆಲಸ ಮಾಡುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಕಣ್ಮರೆಯಾಗಿದ್ದನು.
ಮಾಹಿತಿ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು, ನಿನ್ನೆ ತಡರಾತ್ರಿ 12 ಗಂಟೆಯವರೆಗೆ ಶೋಧ ಕಾರ್ಯ ನಡೆಸಿದ್ದರು. ಆದರೆ ಮೃತದೇಹ ಪತ್ತೆಯಾಗಿರಲಿಲ್ಲ.
ಹೀಗಾಗಿ ಇಂದು ಬೆಳಿಗ್ಗೆ ಮತ್ತೆ ಶೋಧ ಕಾರ್ಯ ಮುಂದುವರಿಸಲಾಗಿತ್ತು. ವ್ಯಕ್ತಿ ಬಿದ್ದು ಜಾಗದಿಂದ ಸ್ವಲ್ಪ ದೂರದಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.