ಮಲ್ಪೆ: ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರ ನಾಪತ್ತೆ

ಮಲ್ಪೆ: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಮೀನುಗಾರನೊಬ್ಬ ಕಣ್ಮರೆಯಾಗಿರುವ ಘಟನೆ ಮಲ್ಪೆ ಬಂದರಿನಿಂದ 27 ನಾಟಿಕಲ್ ಮೈಲಿ ದೂರದಲ್ಲಿ ಸಂಭವಿಸಿದೆ.

ನಾಪತ್ತೆಯಾದ ಮೀನುಗಾರನನ್ನು ತಮಿಳುನಾಡಿನ ಕಡಲೂರು ಜಿಲ್ಲೆಯ ಜಯಪ್ರಕಾಶ (35) ಎಂದು ಗುರುತಿಸಲಾಗಿದೆ. ಇವರು ಡಿ. 21ರಂದು ಮಧ್ಯಾಹ್ನ 3.30ಕ್ಕೆ ಮಲ್ಪೆಯ ಸತೀಶ ಶೆಟ್ಟಿ ಅವರ ‘ದೇವಿ ಚಾಮುಂಡೇಶ್ವರಿ’ ಎಂಬ ಮೀನುಗಾರಿಕಾ ಬೋಟಿನಲ್ಲಿ ಕೇಶವ, ಉಮೇಶ, ರಾಜಕುಮಾರ ಅವರೊಂದಿಗೆ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು.

ಬಂದರಿನಿಂದ ಸುಮಾರು 27 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ಮಾಡುತ್ತಿರುವ ವೇಳೆ ಸಂಜೆ 7.30ಕ್ಕೆ ಸಮುದ್ರದಲ್ಲಿ ತುಪಾನ್ ಉಂಟಾಗಿ ಬೋಟ್ ಒಂದು ಬದಿಗೆ ವಾಲಿದ್ದು, ಆಗ ಜಯಪ್ರಕಾಶ ಆಕಸ್ಮಿಕವಾಗಿ ಬೋಟಿನಿಂದ ಸಮುದ್ರಕ್ಕೆ ಬಿದ್ದಿದ್ದರು.

ರಕ್ಷಿಸಲು ಪ್ರಯತ್ನಿಸಿದರು ಸಿಕ್ಕಿರಲಿಲ್ಲ. ಅಲ್ಲದೆ, ಇತರ ಬೋಟ್ ಗಳೊಂದಿಗೆ ಕಾರ್ಯಾಚರಣೆ ನಡೆಸಿದರು ಪತ್ತೆಯಾಗಿಲ್ಲ. ಈ ಬಗ್ಗೆ ಸಿ. ಧನಶೇಖರ ನೀಡಿದ ದೂರಿನಂತೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.