ಕುಂದಾಪುರ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗ್ತಿದೆ”ಮಲ್ಲದಾನ” ಸಿನಿಮಾ ಚಿತ್ರೀಕರಣ:

ಕುಂದಾಪುರ: ಅಂಗಾಂಗದಾನದ ಮಹತ್ವ ಸಾರುವ, ಕಣ್ಣೀರಗಡಲಲ್ಲಿ ಸಾಗಿ ಬರುವ, ಭಾವನಾತ್ಮಕ ಹಾಗೂ ಸೂಕ್ಷ್ಮ ಸಂವೇದನೆಯುಳ್ಳು ಎರಡು ಗಂಟೆ ಸಮಯದ “ಮಲ್ಲದಾನ” ತುಳು ಸಿನೆಮಾದ ಚಿತ್ರೀಕರಣ ಕೋಡಿ ಕಡಲ ತಡಿಯಲ್ಲಿ ಬಿರುಸಿನಿಂದ ಸಾಗುತ್ತಿದೆ.

ಕರಾವಳಿಯ ಉಡುಪಿ, ಮಲ್ಪೆ, ಮರವಂತೆ, ಕೋಡಿ, ಕುಂದಾಪುರದ ಚಿನ್ಮಯಿ ಆಸ್ಪತ್ರೆ ಹಾಗೂ ಖ್ಯಾತ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಅವರ ಮನೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಈಗಾಗಲೇ ಚಿತ್ರೀಕರಣ ಮುಕ್ಕಾಲು ಭಾಗ ಪೂರ್ಣಗೊಂಡಿದೆ. ಕ್ಲೈಮ್ಯಾಕ್ಸ್ ಚಿತ್ರೀಕರಣ ಕೋಡಿ ಬ್ಯಾರೀಸ್ ಕಾಲೇಜಿನ ಆಸುಪಾಸಿನಲ್ಲಿ ನಡೆಯುತ್ತಿದೆ. ಸುಮಾರು ೨೦ಲಕ್ಷ ಬಜೆಟ್‌ನ ಸಿನಿಮಾ ಇದಾಗಿದ್ದು, ಜೂನ್ ಅಂತ್ಯದಲ್ಲಿ ಚಿತ್ರ ತೆರೆಯ ಮೇಲೆ ಬರಲಿದೆ. ಮಲ್ಲದಾನ ಸಿನಿಮಾ ಚಿತ್ರೀಕರಣ ಎಂಟು ದಿನಗಳನ್ನು ಪೂರೈಸಿದ್ದು, ಇನ್ನೆರಡು ದಿನಗಳಲ್ಲಿ ಚಿತ್ರೀಕರಣ ಮುಗಿಯಲಿದೆ.

ಕಾದಂಬರಿಯಾದಾರಿತ ಕಥೆ

ವ್ಯಕ್ತಿ ಸತ್ತ ಮೇಲೆ ಕಣ್ಣು ಸುಡುವುದು, ದೇಹ ಹೂಳೂವುದು ಸಾಂಸ್ಕೃತಿಕ ನೆಲೆಯಲ್ಲಿ ಸರಿ ಎನಿಸಿದರೂ ಸಾಮಾಜಿಕ ದೃಷ್ಠಿಯಿಂದ ನೋಡಿದರೆ ಅಂಗಾಂಗದಾನದ ಅವಶ್ಯಕತೆ ಅರಿವಾಗುತ್ತದೆ. ಸತ್ತ ಮೇಲೆ ದೇಹ ಮಣ್ಣಾಗುವ ಬದಲು ಅಂಗಾಂಗಗಳನ್ನು ದಾನ ಮಾಡಿದರೆ ಸಾವಿನಂಚಿನಲ್ಲಿರುವವರಿಗೆ ಮರುಜೀವ ನೀಡಿದಂತಾಗುತ್ತದೆ. ಇಂದಿನ ಜನರಿಗೆ ಅಂಗಾಂಗದಾನದ ಬಗ್ಗೆ ಅರಿವು ಮೂಡಿಸುವ ದೃಷ್ಠಿಕೋನವನ್ನಿಟ್ಟುಕೊಂಡು ಕಾದಂಬರಿಯಾದಾರಿತ ಕಥೆಯನ್ನು ಸಿನಿಮಾರೂಪಕ್ಕೆ ತರಲಾಗಿದೆ.

ಹಲವು ಸಿನೆಮಾಗಳಲ್ಲಿ ನಟಿಸಿರುವ ಬೆಂಗಳೂರು ಮೂಲದ ಬಿ. ಶಿವಾನಂದ ಅವರು ಬರೆದಿರುವ ಕಾದಂಬರಿಯಾದಾರಿತ ಕಥೆಯೇ ಮಲ್ಲದಾನ. ಕಥೆ-ಚಿತ್ರಕತೆ ಬರೆದಿರುವ ಬಿ. ಶಿವಾನಂದ್ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ರವಿಚಂದ್ರನ್, ಸುದೀಪ್ ಮಂತಾದ ನಟರೊಂದಿಗೆ ಹಲವು ಸಿನೆಮಾಗಳಲ್ಲಿ ಸಹ ನಟನಾಗಿ ಅಭಿನಯಿಸಿದ್ದ ಹಾಗೂ ಪುಟ್ಟಣ್ಣ ಕಣಗಲ್ ಅವರಿಗೆ ಸಹಾಯ ನಿರ್ದೇಶಕರಾಗಿ ಕೆಲಸ ಮಾಡಿರುವ ಬೆಂಗಳೂರಿನ ಎಮ್‌ಡಿ ಕೌಶಿಕ್ ಮಲ್ಲದಾನ ಸಿನೆಮಾದ ನಿರ್ಮಾಪಕರಾಗಿದ್ದಾರೆ. ರಿಸರ್ವೇಶನ್ ಸಿನಿಮಾದಲ್ಲಿ ತಮ್ಮ ಕೈಚಳಕವನ್ನು ತೋರಿಸಿರುವ ಪಿವಿಆರ್ ಸ್ವಾಮಿ ಮಲ್ಲದಾನ ಸಿನಿಮಾದಲ್ಲಿ ಕರಾವಳಿ ಕಡಲತಡಿಯನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಿದ್ದಾರೆ.

ತಂದೆ-ತಾಯಿ ಮಕ್ಕಳ ನಡುವಿನ ಸಂಭಾಷಣೆ, ವಯಸ್ಸಾದ ಪೋಷಕರನ್ನು ಮಕ್ಕಳು ಹೇಗೆ ನೋಡಿಕೊಳ್ಳುತ್ತಾರೆ. ತಮ್ಮ ತಾಯಿಯ ಕಿಡ್ನಿ ನಿಸ್ತೇಜನಗೊಂಡಾಗ ಮಕ್ಕಳ ಪ್ರತಿಕ್ರಿಯೆ ಹೇಗಿರುತ್ತದೆ. ನಾಯಕ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಹಿರಿಯ ದಂಪತಿಗಳಿಗೆ ಹೇಗೆ ನೆರವಾಗುತ್ತಾನೆ, ತಮ್ಮ ಕಣ್ಣೆದುರೆ ನಾಯಕನಿಗೆ ಅಪಘಾತವಾದಾಗ ಹಿರಿಯ ಜೀವಗಳ ಆಕ್ರಂದನ… ಹೀಗೆ ಹಲವು ಚಿತ್ರಣಗಳನ್ನು ಸಾಗಿ ಹೋಗುತ್ತದೆ. ಒಟ್ಟಿನಲ್ಲಿ ಅಂಗಾಂಗದಾನದ ಮಹತ್ವ ಏನು ಎನ್ನುವ ಸಂದೇಶವನ್ನು ಈ ಸಿನೆಮಾ ಸಾರುತ್ತದೆ.

ಕತೆ ಆರಂಭದಿಂದ ಅಂತ್ಯದವರೆಗೂ ಒಂದಷ್ಟು ಕಾಮಿಡಿ, ಕಡಲತೀರದಲ್ಲಿ ನಾಯಕ-ನಾಯಕಿಯ ಜೊತೆ ಸಾಗಿಬರುವ ಲವ್ ಸ್ಟೋರಿ ಇವೆಲ್ಲವೂ ಒಳಗೊಂಡಂತಹ ಪ್ರೇಕ್ಷಕರನ್ನು ಕಣ್ಣೀರ ಕಡಲಲ್ಲಿ ಮುಳುಗಿಸುವ ಸಿನಿಮಾವೇ ಮಲ್ಲದಾನ. ಇಡೀ ಸಿನಿಮಾದಲ್ಲಿ ಹಾಡು, ನೃತ್ಯ, ಫೈಟಿಂಗ್ ಇಲ್ಲದಿರುವುದು ಈ ಸಿನಿಮಾದ ವಿಶೇಷ.

ಅವಿನಾಶ್ ಮಿಂಚಿಂಗ್:

ಕರಾವಳಿಯ ಮಾಧ್ಯಮಗಳಲ್ಲಿ ವಾರ್ತಾ ವಾಚಕನಾಗಿ, ಟಿವಿ ನಿರೂಪಕನಾಗಿ, ದೇಶ-ವಿದೇಶಗಳಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಕನಾಗಿ ಖ್ಯಾತಿ ಪಡೆದು ಕರಾವಳಿ ಭಾಗಗಳಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಅವಿನಾಶ್ ಕಾಮತ್ ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚಿದ್ದಾರೆ. ಅವಿನಾಶ್‌ಗೆ ಜೋಡಿಯಾಗಿ ಮಾಯಾಕನ್ನಡಿ ಸಿನಿಮಾದಲ್ಲಿ ನಟಿಸಿರುವ ಉಡುಪಿಯ ಪ್ರತಿಭಾನ್ವಿತ ನಟಿ ಶ್ರೀಶ್ರೇಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜರ್ನಲಿಸ್ಟ್ ಆಗಿ ತೆರೆಯ ಮೇಲೆ ಬರಲಿರುವ ಈ ಎರಡು ಮುದ್ದಾದ ಜೋಡಿಗಳ ನಡುವೆ ಸಾಗುವ ಕ್ಯೂಟ್ ಲವ್ ಸ್ಟೋರಿ, ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಉಡುಪಿ ಮೂಲದ ತಾರನಾಥ್ ಹಾಗೂ ಪೂರ್ಣಿಮಾ ಸುರೇಶ್ ಪೋಷಕ ಜೋಡಿಗೆ ಜೀವತುಂಬಿದ್ದಾರೆ. ಇನ್ನು ದುಬೈ ಉದ್ಯಮಿ ಸರ್ವೋತ್ತಮ ಶೆಟ್ಟಿ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಸಹ ನಟನಾಗಿ ಬಣ್ಣ ಹಚ್ಚಿದ್ದಾರೆ. ಉಡುಪಿ ಆಸುಪಾಸಿನ ಪ್ರತಿಭೆಗಳಿಗೆ ಸಿನಿಮಾದಲ್ಲಿ ಅವಕಾಶ ಕಲ್ಪಿಸಿದ್ದು ಸ್ಥಳೀಯ ಪ್ರತಿಭೆಗಳನ್ನು ದೊಡ್ಡ ಪರದೆ ಮೇಲೆ ತರುವ ಪ್ರಯತ್ನಕ್ಕೆ ಸಿನಿಮಾ ತಂಡ ಮುಂದಾಗಿದೆ.

-ಶ್ರೀಕಾಂತ್ ಹೆಮ್ಮಾಡಿ