ಮಳೆ ಕೊಯ್ಲು ಅಳವಡಿಸಿದರೆ ಮಾತ್ರ ನ.ಸಭಾ ಸಮಾಪನ‌ ಪ್ರಮಾಣಪತ್ರ

ಉಡುಪಿ: ಉಡುಪಿ  ನಗರ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸಲಾಗುವ ಮನೆ ಹಾಗೂ ಕಟ್ಟಡಗಳಿಗೆ ಮಳೆನೀರು ಕೊಯ್ಲು ವಿಧಾನ ಅಳವಡಿಕೆ ಕಡ್ಡಾಯಗೊಳಾಗಿದೆ. ಹೀಗಾಗಿ ಈ ವಿಧಾನ ಅಳವಡಿಸಿರುವ ಕಟ್ಟಡ ಹಾಗೂ ಮನೆಗಳಿಗೆ ಮಾತ್ರ ನಗರಸಭೆಯಿಂದ ಸಮಾಪನ ಪ್ರಮಾಣ ಪತ್ರ ನೀಡಲಾಗುವುದು ಎಂದು ನಗರಸಭೆಯ ಪೌರಾಯುಕ್ತ ಆನಂದ ಕಲ್ಲೋಳಿಕರ್‌ ಹೇಳಿದರು.

ಉಡುಪಿ ನಗರಸಭೆಯ ವತಿಯಿಂದ ಬಿಲ್ಡರ್ಸ್‌ ಅಸೋಸಿಯೇಶನ್‌, ಸಿವಿಲ್‌ ಎಂಜಿನಿಯರ್‌ ಹಾಗೂ ನಾಗರಿಕರ ಸಹಭಾಗಿತ್ವದಲ್ಲಿ ಅಜ್ಜರಕಾಡಿನ ಪುರಭವನದ ಮಿನಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾದ ಹೊಸದಾಗಿ ನಿರ್ಮಿಸುವ ಮನೆ ಹಾಗೂ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು
ಅಳವಡಿಸುವ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಮನೆ ಅಥವಾ ಕಟ್ಟಡದ ನಿರ್ಮಾಣ ಕಾರ್ಯ ಪೂರ್ಣಗೊಂಡ ಬಳಿಕ ಖುದ್ದಾಗಿ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುತ್ತಾರೆ. ಆ ಸಂದರ್ಭದಲ್ಲಿ ಮಳೆ ನೀರು ಕೊಯ್ಲು ವಿಧಾನ ಅಳವಡಿಸದಿದ್ದರೆ ಅಂತಹ ಮನೆ ಅಥವಾ ಕಟ್ಟಡಗಳಿಗೆ ಯಾವುದೇ ಕಾರಣಕ್ಕೂ ಸಮಾಪನ ಪ್ರಮಾಣ ಪತ್ರ ನೀಡಲಾಗುವುದಿಲ್ಲ.  ಹಾಗಾಗಿ ಎಲ್ಲರೂ ಮಳೆನೀರು ಕೊಯ್ಲು ವಿಧಾನವನ್ನು ಕಡ್ಡಾಯವಾಗಿ ಅಳವಡಿಸಬೇಕು.

ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಮಳೆನೀರು ಕೊಯ್ಲು ವಿಧಾನ‌ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದ ತಂಡ ರಚಿಸಲಾಗಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಲಕ್ಷ್ಮೀಕಾಂತ್‌ ಮಾತನಾಡಿ, ಪ್ರತಿ ಮನೆಗಳಲ್ಲೂ ಮಳೆ ನೀರು ಕೊಯ್ಲು ವಿಧಾನಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಕೆರೆ, ಸರೋವರಗಳ ಪುನಶ್ಚೇತನಕ್ಕೆ ಒತ್ತು ನೀಡಬೇಕು. ಇದರಿಂದ ಜಲಮೂಲಗಳ ರಕ್ಷಣೆ ಸಾಧ್ಯ. ಮಳೆ ನೀರು ಕೊಯ್ಲು ಹೊಸದಾಗಿ ಬಂದ ಪದ್ಧತಿಯಲ್ಲ. ಇದು ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ ಇದರ ಪ್ರಾಮುಖ್ಯತೆ ಅರಿಯುವಲ್ಲಿ ನಾವು ಹಿಂದುಳಿದ್ದೇವೆ ಎಂದರು.

ಮಣ್ಣಿಗೆ ಪೋಷಕಾಂಶಗಳನ್ನು ಉತ್ಪತ್ತಿಸುವ ಸಾಮರ್ಥ್ಯ ಇದೆ. ಅದು ನಮ್ಮ ಸಂಪತ್ತು ಕೂಡ ಹೌದು. ಸಸ್ಯಕಾಶಿಯು ಮಣ್ಣು ಹಾಗೂ ಮನುಷ್ಯನ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತದೆ. ಇದು ಮಣ್ಣಿನಲ್ಲಿರುವ ಪೋಷಕಾಂಶವನ್ನು ಇನ್ಯಾವುದೋ ರೂಪದಲ್ಲಿ ಪ್ರಾಣಿ, ಪಕ್ಷಿಗಳಿಗೆ ತಂದುಕೊಂಡುತ್ತದೆ. ಆದರೆ ಮಣ್ಣಿನ ಪೋಷಕಾಂಶವನ್ನು ಹೀರಲು ನೀರು ಬೇಕೇ ಬೇಕು. ನೀರು ಇಲ್ಲದಿದ್ದರೆ ಈ ಭೂಮಿಯಲ್ಲಿ ಯಾವುದೇ ಪ್ರಕ್ರಿಯೇ ನಡೆಯುವುದಿಲ್ಲ ಎಂದು ಹೇಳಿದರು.

ಬಿಲ್ಡರ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌, ಸಿವಿಲ್‌ ಎಂಜಿನಿಯರ್‌ಗಳ ಸಂಘದ ಅಧ್ಯಕ್ಷ ಎ. ಗೋಪಾಲಕೃಷ್ಣ ಭಟ್‌, ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ. ಗಣೇಶ್‌, ಪರಿಸರ ಅಭಿಯಂತರ ಬಿ.ಎಸ್‌. ರಾಘವೇಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.