ಮಂಗಳೂರು: ವಯಸ್ಕ ಪುರುಷರ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶ ಇರುವುದಿಲ್ಲ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳಿಗೆ ಸವಾರಿ ಮಾಡಲು ಅವಕಾಶ ಇರುತ್ತದೆ. ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಇಂಥ ಆದೇಶ ಈಗಾಗಲೇ ಜಾರಿಯಾಗಿದ್ದು, ಅದೇ ರೀತಿ ಇಲ್ಲಿಯೂ ಜಾರಿಗೊಳಿಸುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಯಾವುದೇ ಪುರುಷರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ ಆದರೆ ಇಲ್ಲಿ ಎಲ್ಲಾ ವಯಸ್ಕ ಪುರುಷರಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ. 18 ವರ್ಷವಯಸ್ಸಿಂತ ಕೆಳಗಿನ ಶಾಲಾ-ಕಾಲೇಜುಗಳಿಗೆ ಹೋಗುವ ಮಕ್ಕಳಿಗೆ ಈ ನಿರ್ಬಂಧ ಇರುವುದಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

ಈ ನಿಯಮ ಒಂದು ವಾರದಿಂದ ಹತ್ತುದಿನಗಳವರೆಗೆ ಜಾರಿಯಲ್ಲಿರಲಿದೆ. ಜಿಲ್ಲೆಯಲ್ಲಿ ಅಹಿತಕರ ಘಟನೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.