ಮುಂಬೈ: ಮಲಾಡ್ ಉಪನಗರದಲ್ಲಿ ಭಾಷೆ ಸಂಸ್ಕೃತಿಯ ಬೆಳವಣಿಗೆ ಉದ್ದೇಶದಿಂದ ಸ್ಥಾಪನೆಗೊಂಡ ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ವೈದ್ಯಕೀಯ ಕಾರ್ಯ ಚಟುವಟಿಕೆಗಳೊಂದಿಗೆ ಬಹತ್ವದ ನೆಲೆಯಲ್ಲಿ ಸ್ಥಾಪನೆಗೊಂಡ ಮಲಾಡ್ ಕನ್ನಡ ಸಂಘ ಸದಸ್ಯರ ನಿಸ್ವಾರ್ಥ ಸೇವೆ ದಾನಿಗಳ ಕೊಡುಗೆಯಿಂದ ಮಹಾನಗರದಲ್ಲಿ ಹೆಸರುವಾಸಿ ಸಂಸ್ಥೆಯಾಗಿ ಬೆಳೆದಿದೆ. ಭವಿಷ್ಯದಲ್ಲಿ ಸದಸ್ಯರೆಲ್ಲರೂ ಸಹೃದಯ ಮನಸ್ಸಿನಿಂದ ಸಂಘದ ಬೆಳವಣಿಗೆಗೆ ಶ್ರಮಿಸಿದಾಗ ಸಂಘದ ವತಿಯಿಂದ ಇನ್ನಷ್ಟು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯ ಎಂದು ಸಂಘದ ಅಧ್ಯಕ್ಷ ಅಡ್ವಕೇಟ್ ಜಗದೀಶ್ ಎಸ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಸೆ. 17ರಂದು ಮಲಾಡ್ ಪಶ್ಚಿಮ ಮಾರ್ವೆ ರೋಡ್, ಬಫ್ -ಹೀರಾ ನಗರದ ದೀಪ ಮಾಲ ಕೋಆಪರೇಟಿವ್ ಹೌಸಿಂಗ್ ಸೊಸೈಟಿಯ ಹಾಲ್ ನಲ್ಲಿ ಜರುಗಿದ ಮಲಾಡ್ ಕನ್ನಡ ಸಂಘದ 22ನೇ ವಾರ್ಷಿಕ ಮಹಾಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘ ಸಂಸ್ಥೆಗಳಲ್ಲಿ ಸಮಿತಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು ಸಂಸ್ಥೆಯ ಕಾರ್ಯಚಟುವಟಿಗಳನ್ನು ಕಾರ್ಯಗತಗೊಳಿಸಲು ಸದಸ್ಯರ ಅಮೂಲ್ಯ ಸಲಹೆ ಸೂಚನೆಗಳು ಅಗತ್ಯ ಎಂದು ಹೇಳಿದರು.
ಸಭೆಯಲ್ಲಿ ಸಂಘದ ಉಚಿತ ಕಾನೂನು ನೆರವು ಯೋಜನೆಯ ಅಂಗವಾಗಿ ಅಡ್ವಕೇಟ್ ದಯಾನಂದ ಶೆಟ್ಟಿ ಮಹಾನಗರದ ಹೌಸಿಂಗ್ ಸೊಸೈಟಿಗಳ ಪ್ರಸಕ್ತ ಕಾನೂನು ವ್ಯವಸ್ಥೆಯ ಸಮಸ್ಯೆ ಮತ್ತು ಕುಂದುಕೊರತೆಗಳಿಗೆ ಪರಿಹಾರ ಕಂಡು ಕೊಳ್ಳುವ ಬಗ್ಗೆ ಉಚಿತ ಸಲಹೆ ಸೂಚನೆ ಗಳನ್ನು ನೀಡಿ ಸದಸ್ಯರು ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದು ಕೊಳ್ಳುವಂತೆ ಸಲಹೆ ನೀಡಿದರು.
ಆಂತರಿಕ ಲೆಕ್ಕಪರಿಶೋಧಕರಾಗಿ ದಾಮೋದರ ಶೆಟ್ಟಿಗಾರ್ ಮತ್ತು ಲೆಕ್ಕ ಪರಿಶೋಧಕರಾಗಿ ಸಿ ಎ ಸುರೇಂದ್ರ ಶೆಟ್ಟಿ , ಎಸ್ ಕೆ ಶೆಟ್ಟಿ ಅಂಡ್ ಕಂಪನಿ ಅವರನ್ನು ಮುಂದಿನ ವಾರ್ಷಿಕ ಅವಧಿಗೆ ನೇಮಿಸಲಾಯಿತು. ಸದಸ್ಯರ ಪರವಾಗಿ ಅಭ್ಯುದಯ ಬ್ಯಾಂಕ್ ನ ನಿವೃತ್ತ ಉನ್ನತ ಅಧಿಕಾರಿ ಜಯಂತ್ ಶೆಟ್ಟಿ ಮತ್ತು ಹಿಲರಿ ಲೋಬೊ ಮಾತನಾಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷ ದಯಾನಂದ ಶೆಟ್ಟಿ, ಜತೆ ಕೋಶಾಧಿಕಾರಿ ಸಂತೋಷ್ ಕೆ ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲಲಿತಾ ಭಂಡಾರಿ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸಿದ್ದರು.
ಮಹಿಳಾ ವಿಭಾಗದ ಉಪಕಾರ್ಯಾಧ್ಯಕ್ಷೆ ಸಾರಿಕಾ ರತ್ನಾಕರ ಶೆಟ್ಟಿ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ಆಶಾಲತಾ ಎಸ್ ಕೋಟ್ಯಾನ್ ಸ್ವಾಗತಿಸಿ ವಾರ್ಷಿಕ ವರದಿ ವಾಚಿಸಿದರು. ಗೌ. ಕೋಶಾಧಿಕಾರಿ ಶಾಂಭವಿ ಬಿ ಶೆಟ್ಟಿ ಮಂಡಿಸಿದ ವಾರ್ಷಿಕ ಲೆಕ್ಕಪತ್ರವನ್ನು ಸಭೆಯಲ್ಲಿ ಅಂಗೀಕರಿಸಲಾಯಿತು.ಜೊತೆ ಕಾರ್ಯದರ್ಶಿ ಜಯಪ್ರಕಾಶ್ ಸಾಲ್ಯಾನ್ ವಂದಿಸಿದರು.
ಚಿತ್ರ ವರದಿ : ರಮೇಶ್ ಉದ್ಯಾವರ












