ಮಲಬಾರ್ ಗೋಲ್ಡ್: ಸಿಆರ್ ಎಸ್ ಯೋಜನೆಯಡಿ ವಿದ್ಯಾರ್ಥಿವೇತನ- ಸಹಾಯಧನ ವಿತರಣೆ

ಉಡುಪಿ: ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್‌ ಉಡುಪಿ ಸಂಸ್ಥೆಯ ಸಿಆರ್‌ಎಸ್‌ ಯೋಜನೆಯಡಿಯಲ್ಲಿ ವಿದ್ಯಾರ್ಥಿ ವೇತನ ಹಾಗೂ ವಸತಿ ರಹಿತರಿಗೆ ಸಹಾಯಧನ ವಿತರಣಾ ಸಮಾರಂಭವು ಸಂಸ್ಥೆಯ ಉಡುಪಿ ಮಳಿಗೆಯಲ್ಲಿ ನಡೆಯಿತು.
ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಮನೆ ಇಲ್ಲದಿರುವ ಸಾಕಷ್ಟು ಮಂದಿ ನಿರಾಶ್ರಿತರಿದ್ದಾರೆ. ಅಂತಹವರಿಗೆ ಮನೆ ನಿರ್ಮಿಸಿಕೊಡಲು ಸರ್ಕಾರಿ ಯೋಜನೆಯ ಹಣ ಬಹಳಷ್ಟು ಕಡಿಮೆ ಆಗುತ್ತದೆ ಎಂಬ ಅಭಿಪ್ರಾಯವೂ ಇದೆ. ಹಾಗಾಗಿ ಮಲಬಾರ್‌ ಗೋಲ್ಡ್‌ನಂತಹ ಸಂಸ್ಥೆಗಳು ಬಡವರಿಗೆ ಮನೆ ನಿರ್ಮಿಸಲು ಸಹಾಯಧನ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಸಂಸ್ಥೆಯ ಸಿಆರ್‌ಎಸ್‌ ನಿಧಿಯು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರೆಯುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ಕೊಡಬೇಕು. ಆ ಬಡವರಿಗೆ ತಲುಪಿದರೆ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಬಡವರ ಬೆಂಬಲಕ್ಕೆ ನಿಂತಿರುವ ಮಲಬಾರ್‌ ಗೋಲ್ಡ್‌ಗೆ ಸರ್ಕಾರದ
ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುವುದು. ಈ ಸಂಸ್ಥೆಗೆ ಎಲ್ಲ ರೀತಿಯ ಸಹಕಾರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ 19 ವಿವಿಧ ಶಾಲಾ ಕಾಲೇಜುಗಳ ಅರ್ಹ 253 ವಿದ್ಯಾರ್ಥಿನಿಯರಿಗೆ ಒಟ್ಟು 5.93 ಲಕ್ಷ ವಿದ್ಯಾರ್ಥಿ ವೇತನ ಮತ್ತು ಎಂಟು ಅರ್ಹ ವಸತಿ ರಹಿತರಿಗೆ ಎಂಟು ಲಕ್ಷ ಸಹಾಯಧನವನ್ನು ವಿತರಿಸಲಾಯಿತು.
ಮಲಬಾರ್‌ ಗೋಲ್ಡ್‌ ಅಂಡ್‌ ಡೈಮಂಡ್‌ ಉಡುಪಿ ಶಾಖೆಯ ಮುಖ್ಯಸ್ಥ ಹಫೀಝ್‌ ರೆಹಮಾನ್‌ ಮಾತನಾಡಿ, ಸಂಸ್ಥೆಯು ವ್ಯಾಪರದಲ್ಲಿ ಬರುವ ಲಾಭಂಶದ ಶೇ. 5ರಷ್ಟು ಹಣವನ್ನು ಸಿಎಸ್‌ಆರ್‌ ನಿಧಿಗೆ ನೀಡುತ್ತಿದ್ದು, ಇದರಲ್ಲಿ ಬಡವರಿಗೆ ಉಚಿತ ಔಷಧಿ ವಿತರಣೆ, ಪರಿಸರ ಕಾಳಜಿ, ಉಚಿತ ಗೃಹ ನಿರ್ಮಾಣ, ವಿದ್ಯಾರ್ಥಿ ವೇತನ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಉಡುಪಿ ಬಡಗಬೆಟ್ಟು ಕ್ರೆಡಿಟ್‌ ಕೋಆಪರೇಟಿವ್‌ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜ್ಯುವೆಲ್ಲರಿ ಅಸೋಸಿಯೇಶನ್‌ ಅಧ್ಯಕ್ಷ ಅಲೆವೂರು ನಾಗರಾಜ ಆಚಾರ್ಯ, ಉಡುಪಿ ನಗರಸಭೆ ಸದಸ್ಯೆ ಮಾನಸಿ ಚಿದಾನಂದ ಪೈ, ಮಾಜಿ ಸದಸ್ಯ ಶ್ಯಾಂ ಪ್ರಸಾದ್‌ ಕುಡ್ವ ಉಪಸ್ಥಿತರಿದ್ದರು. ತಾರಾ ಭಟ್‌ ಕಾರ್ಯಕ್ರಮ ನಿರೂಪಿಸಿದರು.