ಆಫ್ರಿಕಾದ ಒಂದು ನಿರ್ದಿಷ್ಟ ಸಮುದಾಯದಲ್ಲಿ ಹಿಂದೆ ಬದುಕಿದ್ದ ರಾಜನ ಬಳಿ ಹತ್ತು ಕಾಡು ನಾಯಿಗಳಿದ್ದವು.
ರಾಜನು ತನ್ನ ತಪ್ಪಿತಸ್ಥ ಸೇವಕರನ್ನು ಹಿಂಸಿಸಲು ಮತ್ತು ಅವರನ್ನು ಕೊಲ್ಲಲು ನಾಯಿಗಳನ್ನು ಬಳಸುತ್ತಿದ್ದನು. ಒಮ್ಮೆ ಒಬ್ಬ ಸೇವಕನು ಹೇಳಿದ ತಪ್ಪು ಅಭಿಪ್ರಾಯವು ರಾಜನಿಗೆ ಇಷ್ಟವಾಗಲಿಲ್ಲ. ಆಗ ಅವನು ಆ ಸೇವಕನನ್ನು ನಾಯಿಗೂಡಿನೊಳಗೆ ಎಸೆಯಲು ಆದೇಶಿಸಿದನು.
ಇದನ್ನು ಕೇಳಿದ ಸೇವಕನು “ನಾನು ಕಳೆದ ಹತ್ತು ವರ್ಷಗಳಿಂದ ನಿಮಗೆ ಮತ್ತು ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದೇನೆ, ನೀವು ನನಗೆ ಹೀಗೆ ಮಾಡುತ್ತಿದ್ದೀರಾ? ನನ್ನನ್ನು ಆ ನಾಯಿಗಳಿಗೆ ಎಸೆಯುವ ಮೊದಲು ದಯವಿಟ್ಟು ನನಗೆ ಹತ್ತು ದಿನಗಳನ್ನು ಕೊಡಿ!” ಎಂದನು. ರಾಜನು ಇದಕ್ಕೆ ಒಪ್ಪಿಗೆ ಸೂಚಿಸಿದನು.
ರಾಜನ ಒಪ್ಪಿಗೆ ಪಡೆದ ಸೇವಕನು ನೇರವಾಗಿ ನಾಯಿಗಳನ್ನು ನೋಡಿಕೊಳ್ಳುತ್ತಿದ್ದ ಕಾವಲುಗಾರನ ಬಳಿಗೆ ಹೋಗಿ ಮುಂದಿನ ಹತ್ತು ದಿನಗಳವರೆಗೆ ನಾಯಿಗಳಿಗೆ ತಾನು ಸೇವೆ ಸಲ್ಲಿಸುತ್ತೇನೆಂದು ಕೇಳಿಕೊಂಡನು. ಕಾವಲುಗಾರನಿಗೆ ಆಶ್ಚರ್ಯವಾದರೂ ಆತ ಸೇವಕನ ಮಾತನ್ನು ಒಪ್ಪುತ್ತಾನೆ ಮತ್ತು ನಾಯಿಗಳ ಆರೈಕೆ ಮಾಡಲು ಅನುಮತಿಸುತ್ತಾನೆ. ರಾಜನ ಸೇವಕ ನಿತ್ಯವೂ ನಾಯಿಗಳಿಗೆ ಆಹಾರವನ್ನು ನೀಡುತ್ತಾ ಅವುಗಳನ್ನು ಸ್ವಚ್ಛಗೊಳಿಸುತ್ತಾ, ಸ್ನಾನ ಮಾಡಿಸುತ್ತಾ ಅತ್ಯಂತ ಪ್ರೀತಿ ಮತ್ತು ಸ್ನೇಹದಿಂದ ಅವುಗಳ ಆರೈಕೆ ಮಾಡುತ್ತಾನೆ.
ಈ ರೀತಿ ಹತ್ತು ದಿನಗಳು ಕಳೆದೇ ಹೋಗುತ್ತವೆ. ಹತ್ತು ದಿನಗಳ ನಂತರ ಸೇವಕನಿಗೆ ಶಿಕ್ಷೆ ನೀಡುವ ಘಳಿಗೆ ಬಂದು ಬಿಡುತ್ತದೆ. ರಾಜನು ಸೇವಕನನ್ನು ನಾಯಿಗೂಡಿಗೆ ಎಸೆಯಲು ಆದೇಶಿಸಿಸುತ್ತಾನೆ. ಕಾವಲುಗಾರರು ಅವನನ್ನು ನಾಯಿಗೂಡಿಗೆ ಎಸೆದಾಗ, ನಾಯಿಗಳು ಅವನನ್ನು ಕೊಂದು ತಿನ್ನುವ ಬದಲಿಗೆ ಆತನ ಪಾದವನ್ನು ನೆಕ್ಕಲು ಶುರುಮಾಡುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾಗುತ್ತಾರೆ!
ಇದನ್ನು ಕಂಡು ಆಶ್ಚರ್ಯಚಕಿತನಾದ ರಾಜನು ಸೇವಕನಲ್ಲಿ, “ನನ್ನ ನಾಯಿಗಳಿಗೆ ಏನಾಯಿತು?” ಎಂದು ಕೇಳುತ್ತಾನೆ.
ಗೂಡಿನಲ್ಲಿದ್ದ ಸೇವಕ , “ನಾನು ನಾಯಿಗಳಿಗೆ ಕೇವಲ ಹತ್ತು ದಿನ ಸೇವೆ ಸಲ್ಲಿಸಿದ್ದೇನೆ, ಅವು ನನ್ನ ಸೇವೆಯನ್ನು ಮರೆತಿಲ್ಲ, ಆದರೆ ನಾನು ಕಳೆದ ಹತ್ತು ವರ್ಷಗಳಿಂದ ನಿಮ್ಮ ಸೇವೆ ಮಾಡಿದ್ದೇನೆ ಮತ್ತು ನನ್ನ ಒಂದು ತಪ್ಪಿಗೆ ನೀವು ಎಲ್ಲವನ್ನೂ ಮರೆತು ನನ್ನನ್ನು ಶಿಕ್ಷಿಸುತ್ತಿದ್ದೀರಿ!” ಎಂದನು.
ರಾಜನಿಗೆ ತನ್ನ ತಪ್ಪಿನ ಅರಿವಾಗುತ್ತದೆ ಮತ್ತು ಆತ ಸೇವಕನನ್ನು ಬಿಡುಗಡೆ ಮಾಡಲು ಆದೇಶಿಸುತ್ತಾನೆ. ಒಬ್ಬ ವ್ಯಕ್ತಿಯು ಒಂದು ತಪ್ಪು ಮಾಡಿದ ತಕ್ಷಣ ಆತ ಅದುವರೆಗೂ ಮಾಡಿದ ಒಳ್ಳೆಯದನ್ನು ಮರೆತುಬಿಡುವ ಎಲ್ಲರಿಗೂ ಈ ಕಥೆಯು ಸಂದೇಶವಾಗಿದೆ. ನಮಗೆ ಇಷ್ಟವಾಗದ ತಪ್ಪಿಗೆ ಇನ್ನೊಬ್ಬರ ಒಳ್ಳೆಯ ಇತಿಹಾಸವನ್ನು ಮರೆಯಬಾರದು. ಬದಲಾದ ಜಗತ್ತಿನಲ್ಲಿ ಬದುಕುತ್ತಿರುವಾಗ, ನಾವು ಇನ್ನೂ ಇಂತಹ ರಾಜರುಗಳನ್ನು ನೋಡುತ್ತಲೇ ಇದ್ದೇವೆ….
ಬರಹ: ನಿಶು ಶಿರಾಡಿ