ರಕ್ತದಾನ ಮಾಡುವುದರಿಂದ ನಾವು ಆರೋಗ್ಯವಂತರಾಗಿರಬಹುದು. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಸಂಘ-ಸಂಸ್ಥೆಗಳು ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದಾನ ಮಾಡುವ ಬಗ್ಗೆ ಯುವ ಸಮುದಾಯಕ್ಕೆ ಅರಿವು ಮೂಡಿಸುತ್ತಿರುವುದು ಶ್ಲಾಘನೀಯ ಎಂದು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ನ ಗೌರವಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದರು.
ಅವರು ಎಳ್ಳಾರೆ ಶ್ರೀ ಜನಾರ್ದನ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಡ್ತಲ ಗ್ರಾ.ಪಂ ಅಧ್ಯಕ್ಷೆ ಮಾಲತಿ ದಿನೇಶ್ ಕುಲಾಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕಿನ ಯೋಜನಾಧಿಕಾರಿ ಶ್ರೀಮತಿ ಲೀಲಾವತಿ, ಕಡ್ತಲದ ವೈದ್ಯ ಡಾ ಪ್ರಮೋದ್ ಕುಮಾರ್ ಹೆಗ್ಡೆ,ಕೆಎಂಸಿ ರಕ್ತನಿಧಿ ವಿಭಾಗ ಮಣಿಪಾಲದ ಅಧಿಕಾರಿ ಡಾ ಯಾನ್ಸಿ, ಅಭಯ ಹಸ್ತ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ವಿದ್ಯಾಭಾರತಿಯ ಜಿಲ್ಲಾ ಉಪಾಧ್ಯಕ್ಷೆ ಪ್ರಿಯ ಯೋಗೀಶ್ ಮಲ್ಯ, ಮುನಿಯಾಲು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಸಂಪತ್ ಪೂಜಾರಿ ಪನೋಲು, ಎಳ್ಳಾರೆ ಶ್ರೀ ಲಕ್ಷ್ಮೀ ಜನಾರ್ದನ ಭಜನಾ ಮಂಡಳಿಯ ಸಂಸ್ಥಾಪಕರಾದ ದೇವೇಂದ್ರ ಕಾಮತ್, ದೊಂಡೇರಂಗಡಿ ಶ್ರೀ ಲಕ್ಷ್ಮೀ ಜನಾರ್ದನ ಯಕ್ಷಗಾನ ಕಲಾ ಸಂಘದ ಅಧ್ಯಕ್ಷರಾದ ಹರೀಶ್ ದುಗ್ಗನ್ ಬೆಟ್ಟು ಉಪಸ್ಥಿತರಿದ್ದರು.
ದೇವೇಂದ್ರ ಕಾಮತ್ ಸ್ವಾಗತಿಸಿ, ಹರೀಶ್ ದುಗ್ಗನ್ ಬೆಟ್ಟು ವಂದಿಸಿದರು. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.