ಉಡುಪಿ: ಇನ್ನೋವ ಕಾರಿಗೆ ಮದುವೆ ದಿಬ್ಬಣದ ಅಲಂಕಾರ ಮಾಡಿ ಹಿಂಸಾತ್ಮಕವಾಗಿ ಗೋವುಗಳನ್ನು ತುಂಬಿಸಿಕೊಂಡು
ಸಾಗಾಟ ಮಾಡುತ್ತಿದ್ದ ವೇಳೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿ 10 ಗೋವುಗಳನ್ನು ರಕ್ಷಣೆ ಮಾಡಿರುವ ಕಾಪು ತಾಲೂಕಿನ ಶಿರ್ವದಲ್ಲಿ ಬುಧವಾರ ನಸುಕಿನ ವೇಳೆ ನಡೆದಿದೆ.
ಮಂಗಳವಾರ ತಡರಾತ್ರಿ ಪೆರ್ಡೂರಿನಿಂದ ಮಂಗಳೂರಿಗೆ ಇನ್ನೋವಾ ಹಾಗೂ ಪಿಕಪ್ ವಾಹನದಲ್ಲಿ ಗೋವುಗಳನ್ನು ಸಾಗಿಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಪಡೆದು ತಕ್ಷಣವೇ ಕಾರ್ಯಾಚರಣೆಗೆ ಇಳಿದ ಹಿಂದು ಸಂಘಟನೆಯ ಕಾರ್ಯಕರ್ತರು ವಾಹನಗಳನ್ನು ಹಿಂಬಾಲಿಸಿಕೊಂಡು ಹೋಗಿ ಶಿರ್ವದ ಬಳಿ ತಡೆದಿದ್ದಾರೆ. ಈ ವೇಳೆ ವಾಹನವನ್ನು ರಸ್ತೆಯಲ್ಲೇ ಬಿಟ್ಟು, ಗೋಕಳ್ಳರು ಪರಾರಿಯಾಗಿದ್ದಾರೆ. ಕಾರ್ಯಕರ್ತರು ಇನ್ನೋವಾ ಹಾಗೂ ಪಿಕಪ್ ವಾಹನವನ್ನು ಪರಿಶೀಲಿಸಿದಾಗ ಗೋಕಳ್ಳರು ಹಿಂಸಾತ್ಮಕ ರೀತಿಯಲ್ಲಿ ಗೋವುಗಳನ್ನು ಕಟ್ಟಿ ಸಾಗಿಸುತ್ತಿದ್ದರು. ವಾಹನದಲ್ಲಿ ಒಟ್ಟು 12 ದನಗಳಿದ್ದು, ಆ ಪೈಕಿ ಎರಡು ದನಗಳು ಸಾಗಾಟದ ವೇಳೆ ಉಸಿರುಗಟ್ಟಿ ಮೃತಪಟ್ಟಿವೆ. ಉಳಿದ 10 ದನಗಳನ್ನು ಕಾರ್ಯಕರ್ತರು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಗೋಕಳ್ಳರು ಇನ್ನೋವಾ ವಾಹನಕ್ಕೆ ಮದುವೆ ದಿಬ್ಬಣದ ಅಲಂಕಾರ ಮಾಡಿ ಪೊಲೀಸರನ್ನು ಯಾಮಾರಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕಳೆದ ಒಂದು ವಾರದಿಂದ ಕಾರ್ಕಳ ಸಹಿತ ಜಿಲ್ಲೆಯಾದ್ಯಂತ ಅಕ್ರಮ ಗೋಸಾಗಾಟದ ಹಾವಳಿ ಹೆಚ್ಚುತ್ತಿದ್ದು, ಕಾರ್ಕಳ ಪರಿಸರದಲ್ಲಿ 4 ಮನೆಗಳ ಹಟ್ಟಿಯಿಂದಲೇ ಗೋವುಗಳನ್ನು ಕಳ್ಳತನ ಮಾಡಲಾಗುತ್ತಿದೆ. ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಾಗಿದ್ದರೂ ಅಕ್ರಮ ಗೋಸಾಗಾಟಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ ಎನ್ನುವುದು ವಿಪರ್ಯಾಸದ ಸಂಗತಿ.