ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಭಾರೀ ಆಡಳಿತಾತ್ಮಕ ಬದಲಾವಣೆ ಕೈಗೊಂಡಿರುವ ರಾಜ್ಯ ಸರ್ಕಾರ, ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳಿಗೆ ಮೇಜರ್ ಶಾಕ್ ನೀಡಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ಇಲಾಖೆಯ ಶೇ.80ರಷ್ಟು ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಒಂದೇ ಬಾರಿಗೆ 160 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇವರಲ್ಲಿ 131 ಭೂವಿಜ್ಞಾನಿಗಳು, 23 ಹಿರಿಯ ಭೂವಿಜ್ಞಾನಿಗಳು ಹಾಗೂ 6 ಉಪನಿರ್ದೇಶಕರು ಸೇರಿದ್ದಾರೆ.
ದಶಕಗಳ ಕಾಲ ಸ್ವಂತ ಜಿಲ್ಲೆ ಅಥವಾ ನೆರೆಯ ಜಿಲ್ಲೆಗಳಲ್ಲೇ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ. ದೀರ್ಘಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವುದರಿಂದ ಸ್ವಹಿತಾಸಕ್ತಿ, ಸ್ಥಳೀಯ ಮಟ್ಟದ ಏಕಸ್ವಾಮ್ಯ, ಆಡಳಿತಾತ್ಮಕ ಅಕ್ರಮಗಳಿಗೆ ಅವಕಾಶ ಹಾಗೂ ಸಾರ್ವಜನಿಕ ದೂರುಗಳಿಗೆ ಕಾರಣವಾಗುತ್ತಿದೆ ಎಂದು ಸರ್ಕಾರ ಆದೇಶದಲ್ಲಿ ಉಲ್ಲೇಖಿಸಿದೆ.
ಅನಧಿಕೃತ ಗಣಿಗಾರಿಕೆಗೆ ಕಡಿವಾಣ ಹಾಕುವುದು, ಇಲಾಖೆಯಲ್ಲಿ ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವುದು ಹಾಗೂ ಇಲಾಖೆಯ ಆದಾಯ ಸಂಗ್ರಹಣಾ ಕಾರ್ಯಗಳಿಗೆ ಯಾವುದೇ ಅಡಚಣೆಯಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ಆಡಳಿತಾತ್ಮಕ ಬದಲಾವಣೆ ಜಾರಿಗೆ ತರಲಾಗಿದೆ ಎಂದು ತಿಳಿಸಲಾಗಿದೆ.
ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣವೇ ಹೊಸ ಹುದ್ದೆಗೆ ವರದಿ ಮಾಡಿಕೊಂಡು ಕೇಂದ್ರ ಕಚೇರಿಗೆ ಮಾಹಿತಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ಜುಲೈ 1ರಂದು ನಡೆದ ಗಣಿ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಅವರು ದೀರ್ಘಾವಧಿಯಿಂದ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಈ ಕುರಿತು ಕಡತ ಮಂಡಿಸುವಂತೆ ಸಭೆಯಲ್ಲೇ ಸಿಎಂ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದು, ಅದರ ಬೆನ್ನಲ್ಲೇ ಇಲಾಖೆಯಲ್ಲಿ ಈ ವ್ಯಾಪಕ ವರ್ಗಾವಣೆ ಜಾರಿಯಾಗಿದೆ.















