ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪನ: 7 ಮಂದಿ ಮೃತ್ಯು, 150ಕ್ಕೂ ಹೆಚ್ಚು ಮಂದಿಗೆ ಗಾಯ!

ಅಫ್ಘಾನಿಸ್ತಾನ: ಉತ್ತರ ಅಫ್ಘಾನಿಸ್ತಾನದ ಮಜಾರ್-ಎ-ಶರೀಫ್​ ನಗರದ ಬಳಿ ಇಂದು(ನ. 03) ಮುಂಜಾನೆ 6.3 ತೀವ್ರತೆಯ ಭಾರಿ ಭೂಕಂಪನ(Earthquake) ಸಂಭವಿಸಿದ್ದು, ಕನಿಷ್ಠ 7 ಜನ ಮೃತಪಟ್ಟಿದ್ದು, ಸುಮಾರು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಜಾರ್-ಎ ಶರೀಫ್ ಬಳಿಯ ಉತ್ತರ ಪ್ರಾಂತ್ಯಯದ ಸಮಂಗನ್ ಆರೋಗ್ಯ ಇಲಾಖೆ ವಕ್ತಾರ ಸಮೀಮ್ ಜೋಯಂಡಾ ರಾಯಿಟರ್ಸ್​ ಜೊತೆ ಮಾತನಾಡಿದ್ದು, ಇಂದು ಬೆಳಿಗ್ಗೆ ಸಂಭವಿಸಿದ ಭೂಕಂಪನದಲ್ಲಿ ಒಟ್ಟು 150 ಜನರು ಗಾಯಗೊಂಡಿದ್ದಾರೆ. ಏಳು ಮಂದಿ ಸಾವನ್ನಪ್ಪಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವನ್ನು ರಕ್ಷಣೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇನ್ನೂ ಭೂಕಂಪನದ ಕೇಂದ್ರ ಬಿಂದು ಸುಮಾರು 5,23,000 ಜನಸಂಖ್ಯೆಯನ್ನು ಹೊಂದಿರುವ ಮಜಾರ್-ಎ ಶರೀಫ್ ನಗರದ ಬಳಿ 28 ಕಿಮೀ ಆಳದಲ್ಲಿದೆ ಎಂದು ಯುಸ್​ಜಿಎಸ್​ ಮಾಹಿತಿ ನೀಡಿದೆ.