ಉಡುಪಿ ಏ.8: ಕೊರೋನಾ ನಿಯಂತ್ರ್ರಿಸಲು ಅತ್ಯಗತ್ಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡಿಕೊಳ್ಳುವುದು ಅತ್ಯಂತ ಅವಶ್ಯಕ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ.
ಅವರು ಬುಧವಾರ, ಉಡುಪಿ ರೆಡ್ ಕ್ರಾಸ್ ಭವನದ ಮುಂಬಾಗದಲ್ಲಿ, ಕಾರ್ಮಿಕ ಇಲಾಖೆ, ಉಡುಪಿ ಹಾಗೂ ಭಾರತೀಯ ರೆಡ್ ಕ್ರಾಸ್ ಘಟಕ ಉಡುಪಿ ರವರ ವತಿಯಿಂದ ಕೊರೋನಾ ಕುರಿತು ಜಾಗೃತಿ ಮೂಡಿಸುವ ಸಂಚಾರಿ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊರೋನಾ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಮತ್ತು ನೈರ್ಮಲ್ಯ ಕಾಪಾಡಿಕೊಳ್ಳುವ ವಿಧಾನಗಳು ಹೆಚ್ಚು ಪರಿಣಾಮಕಾರಿಯಾಗಿದೆ ಆದರೆ ನಮ್ಮಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಇನ್ನೂ ಹಿಂದಿದ್ದೇವೆ, ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದೆ, ಸರ್ಕಾರದ ಅದೇಶಗಳನ್ನು ಪಾಲನೆ ಮಾಡುವುದರ ಮೂಲಕ, ಕೊರೋನಾವನ್ನು ದೇಶದಿಂದ ನಿರ್ಮೂಲನೆ ಮಾಡುವಲ್ಲಿ ಅಗತ್ಯ ಸಹಕಾರ ನೀಡುವಂತೆ ಡಿಹೆಚ್ಓ ತಿಳಿಸಿದರು.
ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ಮಾತನಾಡಿ, ವಿಶ್ವದ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಹರಡುವಿಕೆ ಕಡಿಮೆ ಇದೆ, ಜನರ ಸಹಕಾರದಿಂದ ಇದು ಸಾದ್ಯವಾಗಿದೆ,ಉಡುಪಿ ಜಿಲ್ಲೆಯಲ್ಲಿ 3 ಪ್ರಕರಣ ಮಾತ್ರ ಇದೆ ಎಂದು ಆಲಸ್ಯ ತೋರಬಾರದು, ಪಕ್ಕದ ಜಿಲ್ಲೆಗಳಲ್ಲಿ ಕೊರೋನಾ ಪ್ರಕರಣಗಳು ಅಧಿಕವಾಗಿದ್ದು, ಜಿಲ್ಲೆಯ ಜನತೆ ಸಾಮಾಜಿಕ ಅಂತರ ಮತ್ತು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಬಾಲಕೃಷ್ಣ ಮಾತನಾಡಿ,ಕಾರ್ಮಿಕ ಇಲಾಖೆವತಿಯಿಂದ ಜಿಲ್ಲೆಯಲ್ಲಿನ 15000 ಅಸಂಘಟಿತ ಕಾರ್ಮಿಕರಿಗೆ ಕೊರೋನಾ ನಿಯಂತ್ರಣ ಕುರಿತಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮಾಸ್ಕ್ ಗಳು, ಕೈ ತೊಳೆಯುವ ಸೋಪುಗಳು ಮತ್ತು ಕರಪತ್ರಗಳನ್ನು ಹಂಚುವುದರ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಡುಪಿ ರೆಡ್ಕ್ರಾಸ್ ಘಟಕದ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ, ಉಪಸಭಾಪತಿ ವೈ.ಜಿ. ಅಶೋಕ್ ಕುಮಾರ್, ಕಾರ್ಯದರ್ಶಿ ಬಾಲಕೃಷ್ಣ, ಕಾರ್ಮಿಕ ನಿರೀಕ್ಷಕ ಪ್ರವೀಣ್ ಕುಮಾರ್ , ಉಡುಪಿ ಜಿಲ್ಲೆಯ ಕೊರೋನಾ ಸೈನಿಕರು ಮತ್ತಿತರರು ಉಪಸ್ಥಿತರಿದ್ದರು. ಜಯರಾಮ ಆಚಾರ್ಯ ಸಾಲಿಗ್ರಾಮ ಸ್ವಾಗತಿಸಿ, ವಂದಿಸಿದರು.