ಅ.11ರಂದು ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ ‘ಮಹಿಷ ಮಹೋತ್ಸವ’

ಉಡುಪಿ: ಅಂಬೇಡ್ಕರ್ ಯುವಸೇನೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಸಹಭಾಗಿ ಸಂಘಟನೆಗಳ ಸಹಯೋಗದೊಂದಿಗೆ ಮೂಲ ನಿವಾಸಿಗಳ ಸಾಂಸ್ಕೃತಿಕ ಹಬ್ಬ “ಮಹಿಷ ಮಹೋತ್ಸವ”ವನ್ನು ಅ.11ರಂದು ಬೆಳಿಗ್ಗೆ 10.30ಕ್ಕೆ ಉಡುಪಿ ಬನ್ನಂಜೆಯ ಶ್ರೀನಾರಾಯಣಗುರು ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಲೆನಾಡು ಕರಾವಳಿ ಜನಪರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ, ರೈತ ಕೂಲಿ ಸಂಗ್ರಾಮ ಸಮಿತಿಯ ರಾಜ್ಯಾಧ್ಯಕ್ಷ ಎಂ. ಶಿವಣ್ಣ ಕಂದೇಗಾಲ, ಬಹುಜನ ಚಿಂತಕ ನಾರಾಯಣ ಮಣೂರು ಹಾಗೂ ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಭಾಗವಹಿಸಲಿದ್ದಾರೆ.

ಗೌರವ ಉಪಸ್ಥಿತರಾಗಿ ದಸಂಸ ರಾಜ್ಯ ಸಂಚಾಲಕ ಡಾ. ಉದಯ ಕುಮಾರ್ ತಲ್ಲೂರು, ರಾಜ್ಯ ಸಂಘಟನಾ ಸಂಚಾಲಕ ಶೇಖರ ಹಾವಂಜೆ, ಅಂಬೇಡ್ಕರ್ ಸೇನೆ ಜಿಲ್ಲಾಧ್ಯಕ್ಷ ಸತೀಶ್ ಕಂಚುಗೋಡು, ದಸಂಸ ಉಡುಪಿ ಜಿಲ್ಲಾ ಸಂಚಾಲಕ ವಾಸುದೇವ ಮುದ್ದೂರು ಹಾಗೂ ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಕುಮಾರ್ ಪರ್ಕಳ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ದಲಿತ ದೌರ್ಜನ್ಯ ಜಾಗೃತಿ ಸಮಿತಿಯ ಉಡುಪಿ ನಿರ್ದೇಶಕ ಯು. ಪರಮೇಶ್ವರ ಹಾಗೂ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಳೆಬೈಲು ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಮಹಿಷ ಮಹೋತ್ಸವವನ್ನು ಯಾವುದೇ ಧರ್ಮ ಅಥವಾ ಸರಕಾರದ ವಿರುದ್ಧವಾಗಿ ಆಯೋಜಿಸುತ್ತಿಲ್ಲ. ಭಾರತೀಯ ಸಂವಿಧಾನ ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಆಶಯದಂತೆ, ಪುರಾಣ, ಮೌಢ್ಯ ಹಾಗೂ ಅವೈಜ್ಞಾನಿಕ ಸಂಪ್ರದಾಯಗಳ ವಿರುದ್ಧ ಮೂಲ ನಿವಾಸಿಗಳು ಆಚರಿಸುತ್ತಿರುವ ಸಾಂಸ್ಕೃತಿಕ ಹಬ್ಬವಾಗಿ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.

ಮಹಿಷನ ಕುರಿತು ಸ್ಥಾಪಿತ ಹಿತಾಸಕ್ತಿಗಳು ಹಲವು ಮಿಥ್ಯೆಗಳನ್ನು ಸೃಷ್ಟಿಸಿ ಮೂಲ ನಿವಾಸಿಗಳನ್ನು ದಾರಿತಪ್ಪಿಸುವ ಪ್ರಯತ್ನ ಮಾಡುತ್ತಿವೆ ಎಂಬುದು ಸಂಘಟನೆಯ ನಿಲುವಾಗಿದೆ. ಮಹಿಷ ಇತಿಹಾಸ ಪುರುಷ ಎಂಬ ವಿಚಾರವನ್ನು ಪ್ರತಿಪಾದಿಸುವುದು ಹಾಗೂ ಚಾಮುಂಡಿ–ಮಹಿಷನ ಕುರಿತ ಪೌರಾಣಿಕ ಕಥನಗಳಲ್ಲಿನ ಅಂಶಗಳನ್ನು ಪ್ರಶ್ನಿಸುವ ಉದ್ದೇಶದಿಂದ ಮಹೋತ್ಸವ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಸಿ–ಎಸ್‌ಟಿ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಯು. ಪರಮೇಶ್ವರ, ಬೋವಿ ವಡ್ಡರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ್, ಅಂಬೇಡ್ಕರ್ ಯುವಸೇನೆ ಕಾಪು ತಾಲೂಕು ಅಧ್ಯಕ್ಷ ವಸಂತ ಪಾದೆಬೆಟ್ಟು, ರವಿರಾಜ್ ಲಕ್ಷ್ಮೀನಗರ, ಹರೀಶ್ ಸಾಲ್ಯಾನ್, ದಲಿತ ಚಿಂತಕ ಜಯನ್ ಮಲ್ಪೆ ಹಾಗೂ ಸತೀಶ್ ಮಂಚಿ ಉಪಸ್ಥಿತರಿದ್ದರು.