ಸೈಬರ್ ರೇಂಜ್ ಫಿಜಿಟಲ್ ಮತ್ತು ವರ್ಚುವಲ್ ಲ್ಯಾಬ್‌ ಗಾಗಿ ಐಸಾಕ್ ಜೊತೆ ಮಾಹೆ ಒಡಂಬಡಿಕೆ

ಉಡುಪಿ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಮುಂದಿನ ಪೀಳಿಗೆಯ ಫಿಜಿಟಲ್ ಅನ್ನು ಸ್ಥಾಪಿಸಲು ಐ.ಎಸ್.ಎ.ಸಿ (ಐಸಾಕ್) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಕೌಶಲ್ಯ-ನಿರ್ಮಾಣ ಮತ್ತು ಭವಿಷ್ಯದ ಡಿಜಿಟಲ್ ಉದ್ಯೋಗಗಳನ್ನು ಹೆಚ್ಚಿಸಲು ಮಣಿಪಾಲದಲ್ಲಿ ವರ್ಚುವಲ್ ಸೈಬರ್ ಸೆಕ್ಯುರಿಟಿ ಲ್ಯಾಬ್‌ಗಳನ್ನು ಸೃಷ್ಟಿಸುವುದು ಈ ಒಪ್ಪಂದದ ಉದ್ದೇಶ.

ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕರ್ನಾಟಕದ ಎರಡನೇ ಅತಿ ದೊಡ್ಡ ವ್ಯಾಪಾರ ಕೇಂದ್ರವಾದ ಮಂಗಳೂರಿನಲ್ಲಿ ಪ್ರಮುಖ ಬ್ಯಾಂಕ್ ಗಳು ಮತ್ತು ಸಾಫ್ಟ್ ವೇರ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ತಂತ್ರಜ್ಞಾನಾಧಾರಿತ ಯುಗದಲ್ಲಿ ಎಲ್ಲವೂ ಡಿಜಿಟಲ್ ಮಯವಾಗುತ್ತಿರುವಾಗ ಸೈಬರ್ ಅಪರಾಧಗಳೂ ಹೆಚ್ಚುತ್ತಿದ್ದು, ಇವುಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಲು ವೃತ್ತಿಪರರ ಕೊರತೆ ಇದೆ.

ಸೈಬರ್‌ರೇಂಜ್ ಪ್ರಪಂಚದಲ್ಲೇ ಅತಿ ದೊಡ್ಡ ಸೈಬರ್ ಸೆಕ್ಯುರಿಟಿ ಫಿಜಿಟಲ್ ಸಿಮ್ಯುಲೇಶನ್ ಲ್ಯಾಬ್‌ಗಳನ್ನು ಅಭಿವೃದ್ಧಿಪಡಿಸುತ್ತದೆ. ಎಮ್.ಐ.ಟಿಯಲ್ಲಿ ಇಂಡಸ್ಟ್ರಿಯಲ್ ಸೈಬರ್ ಸೆಕ್ಯುರಿಟಿ ಮತ್ತು ವರ್ಚುವಲ್ ತರಬೇತಿಯಲ್ಲಿನ ಸಾಮರ್ಥ್ಯವನ್ನು ಹೆಚ್ಚಿಸಲು ಐಸಾಕ್ ಸೈಬರ್‌ರೇಂಜ್ SCADA/IOT ಫಿಜಿಟಲ್ ಲ್ಯಾಬ್ ಮತ್ತು ವರ್ಚುವಲ್ ಲ್ಯಾಬ್‌ಗಳನ್ನು ನಿಯೋಜಿಸುತ್ತಿದೆ. ಐಸಾಕ್ ಫೌಂಡೇಶನ್ ಎಐಸಿಟಿಇ ಆದೇಶದ ಅಡಿಯಲ್ಲಿ ಸೈಬರ್ ಭದ್ರತೆಯಲ್ಲಿ ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ತಂತ್ರಜ್ಞಾನ ಕೌಶಲ್ಯದಲ್ಲಿ ಮುಂಚೂಣಿಯಲ್ಲಿದೆ.

ಮಂಗಳೂರು ಕೇಂದ್ರೀಕೃತ ಸೈಬರ್ ಸೆಕ್ಯುರಿಟಿ ಹಬ್ ಮತ್ತು ಕ್ಲಸ್ಟರ್‌ಗಳನ್ನು ಸ್ಥಾಪಿಸುವ ಕೆಡಿಇಎಮ್ ಉಪಕ್ರಮದ ಭಾಗವಾಗಿ ಎಮ್.ಐ.ಟಿ ಕಾರ್ಯನಿರ್ವಹಿಸಲಿದೆ. ವರ್ಚುವಲ್ ಲ್ಯಾಬ್‌ಗಳು ಎಐಸಿಟಿಇ ನಿಂದ ನೀಟ್ 2.0 ಅಡಿಯಲ್ಲಿ ಗುರುತಿಸಲ್ಪಟ್ಟಿದೆ. ಯುಜಿ ಮತ್ತು ಪಿಜಿ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯೂರಿಟಿ ಬಗ್ಗೆ ತರಬೇತಿಯನ್ನು ಸರಳಗೊಳಿಸಿ ಪ್ರಸ್ತುತ ಅಗತ್ಯವಿರುವ ಕಾರ್ಪೋರೇಟ್ ಅವಶ್ಯಕತೆಗಳನ್ನು ಪೂರೈಸುತ್ತದೆ.