ಮಾಹೆ: ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಡೋಪಿಂಗ್ ಕುರಿತು ಕಾರ್ಯಾಗಾರ

ಮಣಿಪಾಲ: ರಾಷ್ಟ್ರೀಯ ಶೈಕ್ಷಣಿಕ ನೀತಿ (NEP) 2020 ರ ಅನುಷ್ಠಾನದ ಭಾಗವಾಗಿ, ಕ್ರೀಡೆ ಮತ್ತು ಶಿಕ್ಷಣವನ್ನು ಹತ್ತಿರ ತರಲು, ಮಾಹೆಯ ಸೆಂಟರ್ ಫಾರ್ ಫಾರ್ಮಾಸ್ಯುಟಿಕಲ್ ಸ್ಕಿಲ್ ಡೆವಲಪ್ ಮೆಂಟ್ ಉಡುಪಿಯ ಎಲ್ಲಾ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರಿಗೆ ಅರ್ಧ ದಿನದ ಡೋಪಿಂಗ್ ಕಾರ್ಯಾಗಾರವನ್ನು ಆಯೋಜಿಸಿತ್ತು. ಕ್ರೀಡೆಯಲ್ಲಿ ಮಾದಕ ದ್ರವ್ಯ ಬಳಕೆಯ ಬಗ್ಗೆ ಶಿಕ್ಷಕರ ದೃಷ್ಟಿಕೋನ ಮತ್ತು ಮಾದಕ ದ್ರವ್ಯ ಸೇವನೆಯಿಂದ ಕ್ರೀಡಾಪಟುಗಳ ಜೀವನದ ಮೇಲಾಗುವ ಪರಿಣಾಮ ಇದು ಕಾರ್ಯಗಾರದ ಧ್ಯೇಯವಾಗಿತ್ತು.

ಮಾಹೆಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ.ಎಂ. ಡಿ.ವೆಂಕಟೇಶ್, ‘ಹಾಕ್ ಐ ಆಫ್ ಡೋಪಿಂಗ್’ ಎಂಬ ಶೀರ್ಷಿಕೆಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಡಾ ಶಿವಕುಮಾರ್, ಡಾ ಅನುಪ್ ನಹಾ, ಮಣಿಪಾಲದ ಹಳೆಯ ವಿದ್ಯಾರ್ಥಿ ಡಾ ಪುನಿತ್ ಬನ್ಸಾಲ್ ಮತ್ತು ಮಾಜಿ ಭಾರತೀಯ ಕ್ರಿಕೆಟಿಗ ರಾಬಿನ್ ಸಿಂಗ್ ಸಂಯುಕ್ತ ಸಹಯೋಗದೊಂದಿಗೆ ಬರೆದಿರುವ ಈ ಪುಸ್ತಕವು ಡೋಪಿಂಗ್-ಮುಕ್ತ ಕ್ರೀಡೆಗಳಿಗೆ ಸಾಮೂಹಿಕ ಸಾರ್ವಜನಿಕ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ.

ಮಣಿಪಾಲ್ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್‌ನಲ್ಲಿ ಜೂನ್ 04 ರಂದು ನಡೆದ ಕಾರ್ಯಾಗಾರದಲ್ಲಿ ಉಡುಪಿ ಎಜುಕೇಶನಲ್ ಬ್ಲಾಕ್‌ನ ಸುಮಾರು 100 ಶಿಕ್ಷಕರು ಭಾಗವಹಿಸಿದ್ದರು. ‘ಕ್ರೀಡಾಪಟುಗಳ ಜೀವನದ ಗುಣಮಟ್ಟವನ್ನು ಸುಧಾರಿಸಲು ದೈಹಿಕ ಶಿಕ್ಷಣ ಶಿಕ್ಷಕರ ಸಾಮರ್ಥ್ಯ ನಿರ್ಮಾಣ: ಕ್ರೀಡಾ ಫಾರ್ಮಾಸಿಸ್ಟ್ ದೃಷ್ಟಿಕೋನ’ ಎಂಬ ವಿಷಯದೊಂದಿಗೆ ಕಾರ್ಯಾಗಾರ ನಡೆಯಿತು. ಡೋಪಿಂಗ್ ನಿಯಮದ ಉಲ್ಲಂಘನೆಯ ಸೆಷನ್‌ಗಳು, ಪೌಷ್ಟಿಕಾಂಶದ ಪೂರಕಗಳ ಪಾತ್ರ, ಡೋಪಿಂಗ್ ತಡೆಗಟ್ಟಲು ಕ್ರೀಡಾಪಟುಗಳ ಜೀವನಶೈಲಿ ಮಾರ್ಪಾಡುಗಳು ಮತ್ತು ಮೈದಾನದಲ್ಲಿ ಪ್ರಥಮ ಚಿಕಿತ್ಸೆ ಮುಂತಾದ ವಿಷಯಗಳನ್ನು ಕಾರ್ಯಾಗಾರವು ಒಳಗೊಂಡಿತ್ತು.

ಮಾಹೆಯ ಚೀಫ್ ಇನ್ನೋವೇಶನ್ ಆಫಿಸರ್ ಡಾ ಮೊಹಮ್ಮದ್ ಝುಬೇರ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಉಡುಪಿಯ ಬ್ಲಾಕ್ ಶಿಕ್ಷಣಾಧಿಕಾರಿ ಅಶೋಕ್ ಕಾಮತ್ ಉಪಸ್ಥಿತರಿದ್ದರು.