ಮಣಿಪಾಲ: ಮಾಹೆ-ಮೆರ್ಕ್ ಫೌಂಡೇಶನ್ ನಲ್ಲಿ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದ ಆಫ್ರಿಕಾ ದೇಶದ ವೈದ್ಯರ ಸಮೂಹವು ತಮ್ಮ ಪ್ರಮಾಣಪತ್ರಗಳನ್ನು ಗುರುವಾರದಂದು ಮಾಹೆ ಮತ್ತು ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ ಅಧ್ಯಕ್ಷ ಡಾ ರಂಜನ್ ಪೈ ಅವರಿಂದ ಸ್ವೀಕರಿಸಿತು.
ಮಾಹೆ ಮತ್ತು ಜರ್ಮನಿಯ ಮೆರ್ಕ್ ಫೌಂಡೇಶನ್ ನೀಡುವ ಐ.ವಿ.ಎಫ್ ಭ್ರೂಣಶಾಸ್ತ್ರ ತರಬೇತಿ ಕಾರ್ಯಕ್ರಮವು ಬಂಜೆತನದ ಕೊರಗನ್ನು ನೀಗಿಸಲು ಇನ್-ವಿಟ್ರೊ ಫಲವತ್ತತೆ ತಂತ್ರಗಳನ್ನು ಬಳಸಲು ವೈದ್ಯರಿಗೆ ಅಧಿಕಾರ ನೀಡುತ್ತದೆ.
ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳಲ್ಲಿ ಒಬ್ಬರಾದ ಘಾನಾದ ಮೋನಿಕಾ ಬಾವುವಾ ಮಾತನಾಡಿ, ನನ್ನ ದೇಶದಲ್ಲಿ ಬಂಜೆತನವು ಗಂಭೀರವಾದ ಸಾಮಾಜಿಕ ಸಮಸ್ಯೆಯಾಗಿದೆ ಮತ್ತು ದುರದೃಷ್ಟವಶಾತ್, ದಂಪತಿಗಳಿಗೆ ಐ.ವಿ.ಎಫ್ ಚಿಕಿತ್ಸೆಯನ್ನು ನೀಡಲು ಸೀಮಿತ ಸೌಲಭ್ಯಗಳು ಮತ್ತು ಪರಿಣತಿಯಿಂದಾಗಿ ನಾವು ಅಸಹಾಯಕರಾಗಿದ್ದೆವು. ಆದರೆ ಈ ತರಬೇತಿ ನಂತರ ನಾವೀಗ ಎಲ್ಲಾ ಸಂಕೀರ್ಣ ಬಂಜೆತನ ಸಮಸ್ಯೆಗಳನ್ನು ನಿರ್ವಹಿಸುವ ವಿಶ್ವಾಸ ಹೊಂದಿದ್ದೇವೆ ಎಂದಿದ್ದಾರೆ.
ಮಾಹೆಯ ಸಹಕುಲಪತಿ ಡಾ ಎಚ್.ಎಸ್. ಬಲ್ಲಾಳ್, ಕೆ.ಎಂ.ಸಿ ಮಣಿಪಾಲ್ ನ ಡೀನ್ ಡಾ ಶರತ್ ರಾವ್ ಉಪಸ್ಥಿತರಿದ್ದರು.