ಮಾಹೆ ಮಣಿಪಾಲ: ಮಧುಮೇಹ ಪಾದದ ಆರೈಕೆ ಕಾರ್ಯಾಗಾರ ಉದ್ಘಾಟನೆ

 

ಉಡುಪಿ: ಡಯಾಬಿಟಿಕ್ ಫೂಟ್ ಕೇರ್ & ರಿಸರ್ಚ್ ಸೆಂಟರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್, ಮಣಿಪಾಲ ಸರ್ಜರಿ ಡಿಪಾರ್ಟ್ ಮೆಂಟ್, ಕಸ್ತೂರ್ಬಾ ಮೆಡಿಕಲ್ ಕಾಲೇಜ್, ಮಣಿಪಾಲ ಮತ್ತು ಇಂಡಿಯನ್ ಪೊಡಿಯಾಟ್ರಿ ಅಸೋಸಿಯೇಷನ್, ಕರ್ನಾಟಕ ಚಾಪ್ಟರ್ ಸಹಯೋಗದೊಂದಿಗೆ, ಏಪ್ರಿಲ್ 23 ರಂದು ಟಿ.ಎಮ್.ಎ ಪೈ ಸಭಾಂಗಣ ಮಾಹೆ ಮಣಿಪಾಲದಲ್ಲಿ, “ಅಪ್ ಡೇಟ್ ಆನ್ ಡಯಾಬೆಟಿಕ್ ಫೂಟ್ ಮಣಿಪಾಲ- 2022” ಎಂಬ ಮಧುಮೇಹ ಪಾದದ ಆರೈಕೆ ಕಾರ್ಯಾಗಾರದ ಉದ್ಘಾಟನೆ ನಡೆಯಿತು.

ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆ ಪ್ರೊ ಛಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಧುಮೇಹ ಪಾದಗಳ ಆರೈಕೆಯ ಕುರಿತು ಈ ಕಾರ್ಯಾಗಾರವನ್ನು ಉದ್ಘಾಟಿಸುತ್ತಿರುವುದಕ್ಕೆ ನಮಗೆ ಅತ್ಯಂತ ಹೆಮ್ಮೆಯಾಗುತ್ತಿದೆ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿರುವ ಸುಧಾರಿತ ಮಧುಮೇಹ ಪಾದಗಳ ಆರೈಕೆ ಕೇಂದ್ರವು ಮಧುಮೇಹ ಪಾದದ ತೊಂದರೆಗಳಿರುವ ಜನರ ನೋವನ್ನು ನಿವಾರಿಸಲು ಮಹತ್ತರವಾದ ಕೆಲಸವನ್ನು ಮಾಡುತ್ತಿದೆ. ಸಮಗ್ರ ಆರೈಕೆಯನ್ನು ಒದಗಿಸುವುದರ ಜೊತೆಗೆ, ಮಧುಮೇಹ ಪಾದದ ಕ್ಷೇತ್ರದಲ್ಲಿ ಗುಣಮಟ್ಟದ ಸಂಶೋಧನೆಗೆ ಕೇಂದ್ರವು ಗಮನಹರಿಸುತ್ತದೆ. ಈ ಕಾರ್ಯಾಗಾರವು ಈ ಪ್ರದೇಶದಲ್ಲಿ ಲಭ್ಯವಿರುವ ಅರಿವು ಮತ್ತು ಚಿಕಿತ್ಸೆಗಳ ಮಟ್ಟವನ್ನು ಹೆಚ್ಚಿಸಲು ಇನ್ನೂ ಒಂದು ಹೆಜ್ಜೆಯಾಗಿದೆ ಎಂದರು.

ಮಾಹೆ ಉಪಕುಲಪತಿ. ಜನರಲ್ (ಡಾ.) ಎಮ್.ಡಿ. ವೆಂಕಟೇಶ್, ಇ.ಐ.ಸಿ.ಎಮ್.ಆರ್, ನವದೆಹಲಿ ವಿಜ್ಞಾನಿ ಡಾ. ಗೀತಾ ರವೀಂದ್ರನ್ ಮೆನನ್, ಭಾರತೀಯ ಪೊಡಿಯಾಟ್ರಿ ಅಸೋಸಿಯೇಶನ್‌ನ ರಾಷ್ಟ್ರೀಯ ಅಧ್ಯಕ್ಷ ಡಾ.ಎ.ಪಿ.ಎಸ್.ಸೂರಿ, ಕೆಎಂಸಿ ಡೀನ್ ಡಾ.ಶರತ್ ಕುಮಾರ್ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಎಂಸಿಎಚ್‌ಪಿ ಡೀನ್ ಡಾ. ಜಿ ಅರುಣ್ ಮೈಯ್ಯಾ ಮತ್ತು ಮಣಿಪಾಲದ ಕೆಎಂಸಿಯ ಜೆನ್ ಸರ್ಜರಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ದಿನೇಶ್ ಬಿ ವಿ. ಉಪಸ್ಥಿತರಿದ್ದರು.