ಮಣಿಪಾಲ: ಮಾಹೆ ಸಂಸ್ಥೆಯು ಭಾರತದ ಪ್ರಥಮ ಸಮರ್ಪಿತ ಅಂತರಿಕ್ಷ ವೀಕ್ಷಣಾಲಯ ಆದಿತ್ಯ- ಎಲ್ 1 ನಲ್ಲಿ ಸೌರ ನೇರಳಾತೀತ ಚಿತ್ರಣ ದೂರದರ್ಶಕದಲ್ಲಿ (SUIT) ಪ್ರಥಮ ಚಿತ್ರವನ್ನು ತೆಗೆದ ಸಂಭ್ರಮದಲ್ಲಿ ಭಾಗಿಯಾಗುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು ಸೂರ್ಯನನ್ನು ಅಧ್ಯಯನ ಮಾಡಲು ಆದಿತ್ಯ-ಎಲ್1 ಅನ್ನು ಸೆಪ್ಟೆಂಬರ್ 2 ರಂದು ಉಡಾವಣೆ ಮಾಡಿತ್ತು.
ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ ನ ನಿರ್ದೇಶಕ, ಇಸ್ರೋದ ಅಂತರಿಕ್ಷ ವಿಜ್ಞಾನ ಕಾರ್ಯಕ್ರಮ ಕೇಂದ್ರದ ಮಾಜಿ ನಿರ್ದೇಶಕ ಡಾ. ಶ್ರೀಕುಮಾರ್ ಅವರು ಆದಿತ್ಯ- ಎಲ್ 1 ನ ಉಡಾವಣೆಯ ಕುರಿತು ವಿವರಿಸಿ, ಆದಿತ್ಯ ಎಲ್1 ವಿಶಿಷ್ಟ ಸ್ಥಾನ ಲ್ಯಾಂಗ್ರೇಜ್ ಪಾಯಿಂಟ್ -1 ರಲ್ಲಿ ನೆಲೆ ಕಂಡಿದ್ದು ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆ ಬಹುತೇಕ ಸಮತುಲ್ಯ ಸ್ಥಿತಿಯಲ್ಲಿದೆ. ಇದು ಕಕ್ಷೆಯಲ್ಲಿ ಕಡಿಮೆ ನಿಭಾವಣ ಹೊಣೆಯ ಸ್ಥಾನವಾಗಿದ್ದು ಸೂರ್ಯನ ಬಹುತೇಕ ನಿರಂತರ ಗೋಚರತೆಯನ್ನು ಸುಗಮಗೊಳಿಸುತ್ತದೆ.
SUITಅನ್ನು ಅಭಿವೃದ್ಧಿ ಪಡಿಸುವಲ್ಲಿ ಹಲವು ಸಂಸ್ಧೆಗಳು ಕೈ ಜೋಡಿಸಿವೆ. ಪುಣೆಯ ಖಗೋಳ ವಿಜ್ಞಾನ ಮತ್ತು ಖಗೋಳಭೌತ ವಿಜ್ಞಾನದ ಅಂತರ್-ವಿಶ್ವವಿದ್ಯಾನಿಲಯ ಕೇಂದ್ರವು ಮುಖ್ಯ ಸಂಸ್ಥೆಯಾಗಿದ್ದು ಇದರೊಂದಿಗೆ ಕೈ ಜೋಡಿಸಿದ ಸಂಸ್ಥೆಗಳಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನ ಕೇಂದ್ರ ಮತ್ತು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸೇರಿವೆ ಎಂದರು.
ಮಾಹೆಯ ಮಣಿಪಾಲ್ ಸೆಂಟರ್ ಫಾರ್ ನ್ಯಾಚುರಲ್ ಸೈನ್ಸಸ್ನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಜಿತ್ ಪದಿನ್‌ಹತ್ತೇರಿ ಅವರು SUIT ನ ಯೋಜನಾ ವಿಜ್ಞಾನಿ ಮತ್ತು ನಿರ್ವಹಣ ವ್ಯವಸ್ಥಾಪಕರಾಗಿದ್ದು ಅವರು ಈ ಉಡಾವಣೆಯ ವಿವರವನ್ನು ನೀಡಿ, ಸ್ಯೂಟ್ ನ ಸಾಧನೆ ವಿಶಿಷ್ಟವಾದುದಾಗಿದೆ ಮತ್ತು ಜಗತ್ತಿನಲ್ಲಿ ಪ್ರಥಮ ಬಾರಿಗೆ ನೇರಳಾತೀತ ವರ್ಣವಿಭಾಗೀಕರಣ ಶ್ರೇಣಿ 200 ಎನ್‌ಎಂ ನಿಂದ 400 ಎನ್‌ಎಂ ನ ನಡುವೆ ಸೂರ್ಯನ ಚಿತ್ರ ತೆಗೆಯಲಾಗಿದೆ. ಸೌರಲೋಹಜಲದಲ್ಲಿ ಕಾಂತೀಯ ದ್ರವವಾಹಕದ ಪ್ರಕ್ರಿಯೆಯು ಸೂರ್ಯನ ಮೇಲೆ ಕಪ್ಪುಕಲೆಗಳು, ಅಸಹಜವಾಗಿ ಹೊಳೆಯುವ ಭಾಗಗಳು, ತಂತುಗಳನ್ನು ಉಂಟುಮಾಡುತ್ತದೆ. ಇವು ಕೆಲವೊಮ್ಮೆ ಅನಿರೀಕ್ಷಿತವಾಗಿ ಬೃಹತ್ ಮೊತ್ತದ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಈ ಶಕ್ತಿಯು ಮಿಲಿಯಗಟ್ಟಲೆ ಆ್ಯಟಂಬಾಬ್‌ಗಳು ಆಸ್ಫೋಟಿಸುವುದಕ್ಕೆ ಸಮವಾಗಿರುತ್ತದೆ. ಇವನ್ನು ಸೌರ ಜ್ವಾಲೆ ಎನ್ನಲಾಗುತ್ತದೆ. ಲೋಹ ದ್ರವ ದ ಚಿಮ್ಮುವಿಕೆಯನ್ನು ಪೂರ್ಣ ವಿಸರ್ಜನೆ ಎನ್ನುತ್ತೇವೆ. ಈ ಎಲ್ಲ ಪ್ರಕ್ರಿಯೆಗಳನ್ನು ಸ್ಯೂಟ್ ಅಧ್ಯಯನ ಮಾಡಿದೆ ಮತ್ತು ಇದಕ್ಕೆ ಆಧಾರವಾಗಿರುವ ಭೌತವಿಜ್ಞಾನವನ್ನು ಸರಿಯಾಗಿ ಪರಿಶೀಲಿಸಿದೆ. ನಾವೆಲ್ಲ ತಿಳಿದಿರುವ ಹಾಗೆ ಸೂರ್ಯನಿಂದ
ಹೊಮ್ಮುವ ನೇರಳಾತೀತ ಕಿರಣಗಳು ಭೂಮಿಯ ಮೇಲೆ, ಅದರಲ್ಲೂ ಮೇಲ್ಪದರದಲ್ಲಿ ನೇರ ಪರಿಣಾಮವನ್ನು ಬೀರುತ್ತವೆ.
ಸ್ಯೂಟ್ ಯು ಸಾಮಾನ್ಯವಾಗಿ ಮತ್ತು ಕಾಂತೀಯ ಚಟುವಟಿಕೆಗಳ ಸಂದರ್ಭದಲ್ಲಿ ಸೂರ್ಯನಿಂದ ಎಷ್ಟು ನೇರಳಾತೀತ ಕಿರಣಗಳು ಹೊಮ್ಮುತ್ತವೆ ಎಂಬುದನ್ನು ಸರಿಯಾಗಿ ಪರಿಶೀಲಿಸಿ ಈ ಕಾರ್ಯದಲ್ಲಿ ಮುಂದುವರಿದಿದೆ ಎಂದರು.
ಮಾಹೆಯ ಉಪಕುಲಪತಿಗಳಾದ ಲೆ. ಜ. ಡಾ. ಎಂ. ಡಿ. ವೆಂಕಟೇಶ್ ಅವರು ಮಹತ್ಸಾಧನೆಯಲ್ಲಿ ಮಾಹೆಯು ಭಾಗಿಯಾದ ಬಗ್ಗೆ ಹರ್ಷವನ್ನು ವ್ಯಕ್ತಪಡಿಸಿ, ಇದು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಸ್ಥೆಗೆ ಹೆಮ್ಮೆಯ ಕ್ಷಣವಾಗಿದೆ.
ರಾಷ್ಟ್ರೀಯ ಮಹತ್ತ್ವದ ಉದ್ದೇಶವಿರುವ ಕಾರ್ಯಗಳಿಗೆ ಮಾಹೆಯು ಯಾವತ್ತೂ ಬೆಂಬಲವನ್ನು ಮತ್ತು ಕೊಡುಗೆಯನ್ನು
ನೀಡಲಿದೆ ಎಂದರು.