ಮಣಿಪಾಲ: ಮಾಹೆಯ ಮಣಿಪಾಲ್ ಸ್ಕೂಲ್ ಆಫ್ ಸೈನ್ಸಸ್ ನ ಬಿ.ಎಸ್ಸಿ ಬಯೋಟೆಕ್ನಾಲಜಿಯ 5ನೇ ಸೆಮೆಸ್ಟರ್ ನಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿ ಮೈಥಿಲಿ ಪದವು ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆ ‘ಬಯೋಕ್ವಿಜ್-2022’ ರ ಅಂತಿಮ ಸುತ್ತಿನಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದಿದ್ದಾರೆ.
ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ, ಬಿಟಿ ಮತ್ತು ಎಸ್ & ಟಿ ಇಲಾಖೆಯಿಂದ ಆಯೋಜಿಸಲಾಗಿದದ್ದ ರಾಷ್ಟ್ರ ಮಟ್ಟದ ರಸಪ್ರಶ್ನೆ ಕಾರ್ಯಕ್ರಮವು ಏಷ್ಯಾದ ಅತ್ಯಂತ ಪ್ರತಿಷ್ಠಿತ ಬೆಂಗಳೂರು ಟೆಕ್ ಶೃಂಗಸಭೆಯ ಭಾಗವಾಗಿತ್ತು. ಶೃಂಗಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ಉದ್ಘಾಟಿಸಿದ್ದರು.
ಜೈವಿಕ ತಂತ್ರಜ್ಞಾನದ ಕುರಿತು ಭಾರತದ ಅತಿದೊಡ್ಡ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಾದ ಬಯೋಕ್ವಿಜ್ 2022 ಅನ್ನು ಬೆಂಗಳೂರು ಟೆಕ್ ಶೃಂಗಸಭೆಯ 25 ನೇ ಆವೃತ್ತಿಯ ಭಾಗವಾಗಿ ಆಯೋಜಿಸಲಾಗಿತ್ತು. ಸ್ಪರ್ಧೆಯು ಮೂರು ಸುತ್ತಿನಲ್ಲಿ ಜರುಗಿತು.
ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಬಯೋಕ್ವಿಜ್ 2022 ರ ಅಧ್ಯಕ್ಷತೆಯನ್ನು ವಹಿಸಿದ್ದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಎಲೆಕ್ಟ್ರಾನಿಕ್ಸ್ , ಐಟಿ ಮತ್ತು ಬಿಟಿ ವಿಭಾಗದ ನಿರ್ದೇಶಕಿ ಶ್ರೀಮತಿ. ಮೀನಾ ನಾಗರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.