ಮಹರ್ಷಿ ವಾಲ್ಮೀಕಿ ಸಾಧನೆ ಸರ್ವರಿಗೂ ಪ್ರೇರಣೆ: ರಘುಪತಿ ಭಟ್

ಉಡುಪಿ: ಜಗತ್ತಿಗೆ ಮಹಾನ್ ಮಾನವೀಯ ಮೌಲ್ಯಗಳನ್ನುಳ್ಳ ಸಂದೇಶ ಸಾರುವ ರಾಮಾಯಣ ಮಹಾಕಾವ್ಯವನ್ನು ಬರೆದಂತಹ ಮಹರ್ಷಿ ವಾಲ್ಮೀಕಿ ನಿತ್ಯ ಸ್ಮರಣೀಯರು. ಇಚ್ಚಾಶಕ್ತಿ ಮತ್ತು ಕಠಿಣ ಪರಿಶ್ರಮದ ಮೂಲಕ ಅತ್ಯುನ್ನತ ಸಾಧನೆಗಳನ್ನು ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಮಹರ್ಷಿಯೇ ಸಾಕ್ಷಿ. ದರೋಡೆಕೋರನಾಗಿದ್ದ ರತ್ನಾಕರ ಎಂಬ ವ್ಯಕ್ತಿ ನಾರದ ಮಹರ್ಷಿಗಳ ಪ್ರೇರಣೆಯಿಂದ ಕಠಿಣ ತಪಸ್ಸನ್ನಾಚರಿಸಿ, ಮಹರ್ಷಿಯಾಗಿ ರೂಪುಗೊಂಡು ರಾಮಾಯಣದಂತಹ ಮಹಾನ್ ಕಾವ್ಯ ರಚಿಸಿ ಆದಿಕವಿಯಾಗಿದ್ದು, ಅವರ ಈ ಸಾಧನೆ ಎಲ್ಲರಿಗೂ ಪ್ರೇರಣೆಯಾಗಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅವರು ಭಾನುವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರು ರಾಜ್ಯದಲ್ಲಿನ ಮೀಸಲಾತಿ ವಿಚಾರದಲ್ಲಿ ಅತ್ಯಂತ ದಿಟ್ಟ ನಿರ್ಧಾರ ಕೈಗೊಂಡು ಪ.ಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ 17 ಕ್ಕೆ ಹಾಗೂ ಪ.ವರ್ಗದ ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ 7 ಕ್ಕೆ ಏರಿಕೆ ಮಾಡುವ ಮೂಲಕ ಪ.ಜಾತಿ ಮತ್ತು ಪಂಗಡದ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಅವಕಾಶಗಳು ದೊರೆಯುವಂತೆ ಮಾಡಿರುವುದು ಐತಿಹಾಸಿಕ ತೀರ್ಮಾನವಾಗಿದ್ದು, ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ ಶಾಸಕರು, ಈ ವರ್ಗಗಳ ಜನತೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ವಾಲ್ಮೀಕಿ ಮಹರ್ಷಿ ರಾಮಾಯಣ ರಚನೆಯ ಮೂಲಕ ಭಾರತವನ್ನು ಪುಣ್ಯಭೂಮಿಯನ್ನಾಗಿ ಮಾಡಿದ್ದಾರೆ. ಅವರನ್ನು ನೆನದರೆ ಶ್ರೀರಾಮನನ್ನು ನೆನೆದಂತೆ, ಅವರು ರಚಿಸಿದ ರಾಮಾಯಣವನ್ನು ಪಠಣ ಮಾಡುವುದು, ವಿಷ್ಣು ಸಹಸ್ರನಾಮ ಪಠಣಕ್ಕೆ ಸಮವಾದುದು ಎಂದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.

ಮಹರ್ಷಿ ವಾಲ್ಮೀಕಿ ಅವರ ವ್ಯಕ್ತಿತ್ವ ಮತ್ತು ಜೀವನದ ಬಗ್ಗೆ ಉಪನ್ಯಾಸ ನೀಡಿದ ಸಾಹಿತಿ ಮತ್ತು ಶಿಕ್ಷಕ ನರೇಂದ್ರ ಕುಮಾರ್ ಕೋಟ ಮಾತನಾಡಿ, ದುಷ್ಟನಾಗಿದ್ದ ರತ್ನಾಕರ ಎಂಬ ವ್ಯಕ್ತಿ ತನ್ನ ಜೀವನದಲ್ಲಿ ನಡೆದ ಒಂದು ಘಟನೆಯಿಂದ ಮಹರ್ಷಿ ವಾಲ್ಮೀಕಿಯಾಗಿ ರೂಪುಗೊಂಡರು. ಪ್ರತಿಯೊಬ್ಬರ ಬದುಕಿನಲ್ಲಿ ಒಂದು ತಿರುವು ಬರುತ್ತದೆ ಅದರಿಂದ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳಾಗುತ್ತವೆ. ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯದಲ್ಲಿನ 24000 ಶ್ಲೋಕಗಳು ಸಾಮಾಜಿಕ ಮೌಲ್ಯಗಳು, ಆದರ್ಶ ಪರಂಪರೆ, ಮಾನವೀಯ ಮೌಲ್ಯಗಳು, ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮದ ಸಂದೇಶಗಳನ್ನು ಸಾರುವ ಮೂಲಕ ಇಡೀ ಜಗತ್ತಿಗೆ ಸದಾ ಕಾಲಕ್ಕೆ ಅನ್ವಯವಾಗುವ ಜೀವನ ಸಂದೇಶಗಳನ್ನುನೀಡುತ್ತವೆ. ವಾಲ್ಮೀಕಿ ಅವರ ಇಚ್ಚಾಶಕ್ತಿ, ಅದಮ್ಯ ಚೇತನ ಎಲ್ಲರಿಗೂ ಮಾದರಿಯಾಗುವ ಜೊತೆಗೆ ರಾಮಾಯಣದ ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರೂ ಬೆಳೆಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ.ವರ್ಗದ ಸಮುದಾಯದಲ್ಲಿ ವಿಶಿಷ್ಠ ಸಾಧನೆ ಮಾಡಿದ ಡಾ.ಉದಯ ಕುಮಾರ್ ಚೇರ್ಕಾಡಿ, ತೆಂಕುಮಾರ್ ನಾರಾಯಣ ಗೌಡ, ಸುರೇಶ್ ಎಳಜಿತ್ ಹಾಗೂ ಶೈಕ್ಷಣಿಕ ಮತ್ತು ಕ್ರೀಡಾ ವಲಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಇಲಾಖೆಯ ವಿವಿಧ ಸವಲತ್ತುಗಳ ವಿತರಣೆ ಕಾರ್ಯಕ್ರಮ ನಡೆಯಿತು.

ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಉಪಸ್ಥಿತರಿದ್ದರು.

ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ದೂದ್‍ಪೀರ್ ಸ್ವಾಗತಿಸಿದರು, ಪ್ರಶಾಂತ್ ಶೆಟ್ಟಿ ಹಾವಂಜೆ ನಿರೂಪಿಸಿದರು.