ಮಂಗಳೂರು: ಕೊರೊನಾ ಮಹಾಮಾರಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಭಾರತದಲ್ಲೂ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕಿದೆ.
ಪತ್ರಕರ್ತರು ಕೊರೊನಾ ಜಾಗೃತಿ ಮೂಡಿಸಲು ಮತ್ತು ಸುದ್ದಿಯ ಧಾವಂತದಲ್ಲಿ ಜೀವದ ಹಂಗು ತೊರೆದು ದುಡಿಯುತ್ತಿದ್ದಾರೆ. ಇದರ ಪರಿಣಾಮ ಜನರಲ್ಲಿ ದೊಡ್ಡ ಮಟ್ಟದಲ್ಲಿ ಜಾಗೃತಿ ಮೂಡಿರುವುದು ಒಪ್ಪತಕ್ಕಂತಹ ಸತ್ಯ. ಅದೇ ರೀತಿ ಪತ್ರಕರ್ತರು ತಮ್ಮ ಬಗ್ಗೆಯೂ ಎಚ್ಚರವಹಿಸಬೇಕಾಗಿದೆ. ಮುಂಬಯಿಯಲ್ಲಿ 6 ಮಂದಿ ಪತ್ರಕರ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಮಧ್ಯಪ್ರದೇಶದಲ್ಲಿ ಪತ್ರಕರ್ತರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು, ಕಾಸರಗೋಡಿನಲ್ಲೂ ಪತ್ರಕರ್ತರು ತೀವ್ರ ನಿಗಾದಲ್ಲಿದ್ದದ್ದು ನಮಗೆ ನಿದರ್ಶನ.
ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರು ಹೆಚ್ಚು ಜಾಗರೂಕರಾಗಬೇಕಾಗಿದೆ. ಇದಕ್ಕಾಗಿ ಜಿಲ್ಲಾಡಳಿತ, ಜನಪ್ರತಿನಿಧಿಗಳಲ್ಲಿ ಮೇ 3 ಲಾಕ್ಡೌನ್ ಮುಗಿಯುವವರೆಗೆ ಪತ್ರಿಕಾಗೋಷ್ಠಿ ನಡೆಸದಿರುವಂತೆ ಮನವಿ ಮಾಡಲಾಗಿದೆ. ಯಾವುದೇ ಸೂಚನೆ ನೀಡುವುದಿದ್ದರೂ ವಿಡಿಯೋ ಸಂದೇಶ, ಪತ್ರಿಕಾ ಪ್ರಕಟಣೆ ನೀಡಬೇಕೆಂದು ಆಗ್ರಹಿಸಲಾಗಿದೆ. ಇದಕ್ಕೆ ಎಲ್ಲ ಪತ್ರಕರ್ತರ ಸಹಕಾರ ಅಗತ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.