ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್: 2020-21ನೇ ಸಾಲಿನಲ್ಲಿ ₹5.88 ಕೋಟಿ ಲಾಭ; ಯಶ್‌ಪಾಲ್ ಎ. ಸುವರ್ಣ

ಉಡುಪಿ: ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2020-21ನೇ ಸಾಲಿನಲ್ಲಿ ₹5.88 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2020-21ನೇ ಸಾಲಿನಲ್ಲಿ ₹ 243.37 ಕೋಟಿ ಠೇವಣಿ ಸಂಗ್ರಹ ಹಾಗೂ ₹ 177.44 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ ಶೇ. 55.03 ಸಾಲ ಮತ್ತು ಮುಂಗಡ ಶೇ. 35.73 ಪ್ರಗತಿ ಸಾಧಿಸಿದ್ದು, ₹10 ಲಕ್ಷದವೆರೆಗೆ ಸದಸ್ಯರು ಪಾಲು ಬಂಡವಾಳ ಹೊಂದಲು ಅವಕಾಶ ಕಲ್ಪಿಸಲಾಗಿದೆ.

ಕಳೆದ 11 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ ಶೇ. 18 ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ.
ಬ್ಯಾಂಕ್ ಪ್ರಸ್ತುತ 241 ಕೋಟಿ ಠೇವಣಿ ಹಾಗೂ 189 ಕೋಟಿ ಸಾಲ ಮತ್ತು ಮುಂಗಡದೊಂದಿಗೆ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ದಾಖಲಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕಿನ ಆದೇಶದನ್ವಯ ₹ 100 ಕೋಟಿಗೂ ಮಿಕ್ಕಿ ಠೇವಣಿ ಹೊಂದಿರುವ ಎಲ್ಲಾ ಪಟ್ಟಣ ಸಹಕಾರಿ ಬ್ಯಾಂಕ್ ಕಡ್ಡಾಯವಾಗಿ “ಬೋರ್ಡ್ ಆಫ್ ಮ್ಯಾನೇಜ್‌ಮೆಂಟ್” ಹೊಂದಿರಬೇಕಾಗಿದ್ದು, ರಚನೆಯ ಪ್ರಕ್ರಿಯೆಗೆ ಕಾರ್ಯಪ್ರವೃತ್ತವಾಗಿದೆ.
ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ವಿಸ್ತರಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತರ ಕನ್ನಡ ಹಾಗೂ ರಾಜಧಾನಿ ಬೆಂಗಳೂರಿನಲ್ಲಿಯೂ ಶಾಖೆಗಳನ್ನು ಆರಂಭಿಸಿ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸುವ ಯೋಜನೆ ಆಡಳಿತ ಮಂಡಳಿಯ ಮುಂದಿರುವುದಾಗಿ ತಿಳಿಸಿದ್ದಾರೆ.

ಎಲ್ಲಾ ಶಾಖೆಗಳಲ್ಲಿ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಆರ್.ಟಿ.ಜಿ.ಎಸ್., ನೆಫ್ಟ್ ಸೌಲಭ್ಯವನ್ನು ಉಚಿತವಾಗಿ ನೀಡುತ್ತಿದೆ. ಸೇಫ್ ಡೆಪಾಸಿಟ್ ಲಾಕರ್, ಇ-ಸ್ಟ್ಯಾಂಪಿಂಗ್, ಎಸ್‌ಎಮ್‌ಎಸ್ ಬ್ಯಾಂಕಿಂಗ್, ಎಬಿಕ್ಸ್ ಕ್ಯಾಶ್ (ವೆಸ್ಟರ್ನ್ ಯೂನಿಯನ್), ಎಚ್‌ಡಿಎಫ್‌ಸಿ ಬ್ಯಾಂಕಿನ ಒಡಂಬಡಿಕೆಯೊಂದಿಗೆ ಎಟಿಎಂ ಸೌಲಭ್ಯ, ಮೊಬೈಲ್ ಬ್ಯಾಂಕಿಂಗ್, ಸಾಮಾನ್ಯ ಸೇವಾ ಕೇಂದ್ರ , ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (BBP) ಹಾಗೂ ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ ಸೇವೆಗಳನ್ನು ಅಳವಡಿಕೊಳ್ಳಲಾಗಿದೆ. ಈಗಾಗಲೇ ನ್ಯೂ ಇಂಡಿಯಾ ಇನ್‌ಶ್ಯೂರೆನ್ಸ್ ಕಂಪೆನಿ ಕಾರ್ಪೋರೇಟ್ ಏಜೆಂಟ್ ಮೂಲಕ ವಿಮಾ ಸೌಲಭ್ಯವನ್ನು ಒದಗಿಸುತ್ತಿದೆ. ಬ್ಯಾಂಕಿನ ಅಧಿಕೃತ ವೆಬ್‌ಸೈಟ್ (www.mahlakshmicoopbank.com) ಮೂಲಕ ಗ್ರಾಹಕರು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

ಮಹಿಳಾ ಮೀನುಗಾರರ ಸ್ವಸಹಾಯ ಸಂಘಗಳನ್ನು ರಚಿಸಿ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕೋವಿಡ್-19ನ ಸಂದರ್ಭದಲ್ಲಿ ನಮ್ಮ ಗ್ರಾಹಕರ ಹಿತದೃಷ್ಟಿಯಿಂದ ಸಾಲದ ಕಂತನ್ನು ಮರು ಪಾವತಿಸಿದ್ದಲ್ಲಿ ಶೇ. 2 ಬಡ್ಡಿ ದರದಲ್ಲಿ ವಿನಾಯಿತಿ ಘೋಷಿಸಿದ್ದು, ಕೊರೋನಾ ಸಂದಿಗ್ಧ ಪರಿಸ್ಥಿತಿಯಲ್ಲಿ ಸಣ್ಣ ಉದ್ದಿಮೆದಾರರಿಗೆ ಕೋವಿಡ್ ಎಕ್ಸ್ಪ್ರೆಸ್ ಸಾಲ ಯೋಜನೆ ಮೂಲಕ ಸುಮಾರು 1000 ಗ್ರಾಹಕರಿಗೆ 15 ಕೋಟಿ ಸಾಲ ವಿತರಿಸಲಾಗಿದೆ.

ಪ್ರಸ್ತುತ ಕೋವಿಡ್-19 2ನೇ ಅಲೆಯ ಈ ಸಂಕಷ್ಟದ ಸಮಯದಲ್ಲಿ ಬ್ಯಾಂಕಿನ ಸದಸ್ಯ ಗ್ರಾಹಕರ ಹಿತದೃಷ್ಟಿಯಿಂದ ಕೋವಿಡ್ ಪೀಡಿತ ಸದಸ್ಯರಿಗೆ “ಆರೋಗ್ಯ ಸಹಾಯ ನಿಧಿ” ಹಾಗೂ ಕಾರ್ಮಿಕ ವರ್ಗದ ಗ್ರಾಹಕರಿಗಾಗಿ “ಮಹಾಲಕ್ಷ್ಮೀ ಸ್ವಾವಲಂಬನಾ ಶಕ್ತಿ ಕೋವಿಡ್ ಸಾಲ ಯೋಜನೆ” ಮೂಲಕ ದಿನವಹಿ ಮರುಪಾವತಿ ಸಾಲವನ್ನು ನೀಡಲಾಗುತ್ತಿದೆ.
ಪ್ರತಿವರ್ಷ ಬ್ಯಾಂಕಿನ ಅರ್ಹ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿದ್ದು, 1978ರಲ್ಲಿ ಆರಂಭಗೊಂಡಿರುವ ಬ್ಯಾಂಕ್ 43 ವರ್ಷಗಳನ್ನು ಪೂರೈಸಿದ್ದು, 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಆಚರಿಸುವ ಸಂದರ್ಭದಲ್ಲಿ 1 ಲಕ್ಷ ಸದಸ್ಯರನ್ನೊಳಗೊಂಡು, 1 ಸಾವಿರ ಕೋಟಿ ಠೇವಣಿ ಹಾಗೂ 10 ಸಾವಿರ ಕೋಟಿ ವಾರ್ಷಿಕ ವ್ಯವಹಾರದ ಗುರಿಯನ್ನು ಹೊಂದಿರುತ್ತದೆ.

ಪ್ರಸಕ್ತ ಸಾಲಿನಲ್ಲಿ ಮತ್ಸ್ಯಕ್ಷಾಮ ಹಾಗೂ ಕೋವಿಡ್-19 ಸಂದರ್ಭದಲ್ಲಿಯೂ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.