ಪ್ರಸಕ್ತ ಸಾಲಿನಲ್ಲಿ 16 ಕೋಟಿ ಲಾಭಗಳಿಸಿದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ: ಯಶ್‍ಪಾಲ್ ಸುವರ್ಣ 

ಉಡುಪಿ: ಕರಾವಳಿ ಭಾಗದ ಪ್ರತಿಷ್ಠಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2022-23ನೇ ಸಾಲಿನಲ್ಲಿ ರೂ. 812.19 ಕೋಟಿ ವ್ಯವಹಾರ ನಡೆಸಿ ರೂ. 16 ಕೋಟಿ ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷ ಯಶ್‍ಪಾಲ್ ಸುವರ್ಣ ತಿಳಿಸಿದ್ದಾರೆ.

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ 28,000 ಸದಸ್ಯರು ಹಾಗೂ 35,000 ಗ್ರಾಹಕರ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2022-23ನೇ ಸಾಲಿನಲ್ಲಿ 475 ಕೋಟಿ ಠೇವಣಿ, 339 ಕೋಟಿ ಸಾಲ ಮತ್ತು ಮುಂಗಡದೊಂದಿಗೆ, ರೂ. 28.42 ಕೋಟಿ ಪಾಲು ಬಂಡವಾಳದೊಂದಿಗೆ, ಹಣಕಾಸು ವರ್ಷದಲ್ಲಿ ಠೇವಣಿ ಸಂಗ್ರಹಣೆಯಲ್ಲಿ 29%, ಸಾಲ ಮತ್ತು ಮುಂಗಡ 24%, ಪಾಲು ಬಂಡವಾಳ 46% ಪ್ರಗತಿ ಸಾಧಿಸಿದೆ.

ಕಳೆದ 14 ವರ್ಷಗಳಿಂದ ನಿರಂತರವಾಗಿ ಸದಸ್ಯ ಗ್ರಾಹಕರಿಗೆ 18% ಡಿವಿಡೆಂಡ್ ನೀಡುವ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯನ್ನು ಪಡೆದಿದೆ. 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ವತಿಯಿಂದ ಉತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರ ಕ್ಷೇತ್ರವನ್ನು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ವಿಸ್ತರಿಸಲಾಗಿದೆ. ಬ್ಯಾಂಕಿನ ಮಲ್ಪೆ, ಕುಂದಾಪುರ, ಮಂಗಳೂರು, ಸುರತ್ಕಲ್ ಶಾಖೆ ಹಾಗೂ ಆಡಳಿತ ಕಚೇರಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಶಾಖೆಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿಗೆ ಸರಿಸಮನಾಗಿ ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್ ಸೇವೆ ಸಹಿತ ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಗ್ರಾಹಕರಿಗೆ ಸೇವೆ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ಯೋಜನೆಗಳ ಸಬ್ಸಿಡಿಯ ಮೊತ್ತ ನೇರ ಜಮೆ ಮಾಡಲು ಗ್ರಾಹಕರ ಖಾತೆಗಳು ಮಾನ್ಯತೆ ಹೊಂದಿವೆ.

ಮಹಾಲಕ್ಷ್ಮೀ ಬ್ಯಾಂಕ್ ಗ್ರಾಹಕರ ಹಾಗೂ ಸಂಘ ಸಂಸ್ಥೆಗಳ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ಹಾಗೂ ಎಲ್ಲಾ ಬಗೆಯ ಸಾಲ ಸೌಲಭ್ಯಗಳನ್ನು ಕನಿಷ್ಟ ಬಡ್ಡಿದರದಲ್ಲಿ ಗ್ರಾಹಕರಿಗೆ ಒದಗಿಸಲಾಗಿದೆ.

ಈ ಹಣಕಾಸು ವರ್ಷದಲ್ಲಿ ಬ್ಯಾಂಕಿನ ಕಾರ್ಯಕ್ಷಮತೆಗೆ ಪೂರಕವಾಗಿ ಆಡಳಿತ ಕಚೇರಿಯನ್ನು ವಿಸ್ತರಿಸಲಾಗಿದ್ದು, ಕುಂದಾಪುರ ಮತ್ತು ಗಂಗೊಳ್ಳಿ ಶಾಖೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗ್ರಾಹಕರ ಸಮಾವೇಶವನ್ನು ನಡೆಸಲಾಗಿದೆ. ಬ್ಯಾಂಕಿನ ವತಿಯಿಂದ 1500 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ರೂ. 25 ಲಕ್ಷ ವೆಚ್ಚದಲ್ಲಿ ಪ್ರತಿಭಾ ಪುರಸ್ಕಾರ ವಿತರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಶಾಲಾ ದಿನಗಳಲ್ಲಿಯೇ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ವಿದ್ಯಾಸಿರಿ ಝೀರೋ ಬ್ಯಾಲೆನ್ಸ್ ಖಾತೆ ಸೌಲಭ್ಯ, ಮಲ್ಪೆ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ, ಸಮುದ್ರ ಮಧ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕೋಟಿ ಕಂಠ ಗಾಯನ ಆಯೋಜನೆ, ಉಚ್ಚಿಲ ದಸರಾ ಮಹೋತ್ಸವದ ಸಂದರ್ಭದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆಯೋಜಿಸಿದ್ದು, ಕಾಮನ್ ವೆಲ್ತ್ ಪದಕ ವಿಜೇತ ಗುರುರಾಜ್ ಪೂಜಾರಿ ಯವರಿಗೆ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ರಾಷ್ಟ್ರಧ್ವಜ ಹಸ್ತಾಂತರಿಸಿ ಸನ್ಮಾನ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುಡ್ಡ ಪಾಣಾರ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಶಾಂತಾ ವಿ. ಆಚಾರ್ಯರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಿ ಗೌರವಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ.

ಗ್ರಾಹಕ ಸ್ನೇಹಿ ಸೇವೆಯೊಂದಿಗೆ ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ನಿರಂತರ ಪ್ರಗತಿ ಸಾಧಿಸುತ್ತಿರುವ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಶೀಘ್ರದಲ್ಲೇ ಸ್ವಂತ ಐ. ಎಫ್. ಎಸ್. ಸಿ. ಕೋಡ್ ಹೊಂದುವ ಮೂಲಕ ಕರಾವಳಿ ಭಾಗದ ಪ್ರಪ್ರಥಮ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವ್ಯವಹಾರದಲ್ಲಿ ಸಹಕರಿಸಿದ ಸರ್ವರಿಗೂ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಲಹೆ ಸಹಕಾರವನ್ನು ಯಾಚಿಸುವುದಾಗಿ ಅಧ್ಯಕ್ಷ ಯಶ್‍ಪಾಲ್ ಸುವರ್ಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.