ಉಡುಪಿ: ಮಹಿಳಾ ಮೀನುಗಾರರ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮೀ ಕೋ–ಆಪರೇಟಿವ್ ಬ್ಯಾಂಕ್ ಮೂಲಕ
ಮಂಜೂರುಗೊಂಡ ಶೂನ್ಯ ಬಡ್ಡಿದರದ ಸಾಲ ಯೋಜನೆಯ 2.5 ಕೋಟಿ ಮೊತ್ತದ ಚೆಕ್‌ಗಳನ್ನು ಬ್ಯಾಂಕ್‌ನ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಈಚೆಗೆ ವಿತರಿಸಿದರು.
ಬಳಿಕ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮಹಿಳಾ ಮೀನುಗಾರರ ಶೂನ್ಯ ಬಡ್ಡಿದರ ಸಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಮಹಾಲಕ್ಷ್ಮೀ ಬ್ಯಾಂಕ್ ವಿಶೇಷ ಮುತುವರ್ಜಿಯಿಂದ ಕಾರ್ಯನಿರ್ವಹಿಸುತ್ತಿದ್ದು, ಅರ್ಹ ಮಹಿಳಾ ಮೀನುಗಾರರಿಗೆ ಈ ಸಾಲ ಸೌಲಭ್ಯವನ್ನು ತಲುಪಿಸಲು ಕೆಲಸ ಮಾಡುತ್ತಿದೆ. ಇದನ್ನು
ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.
ಶೀಘ್ರದಲ್ಲಿಯೇ ಬ್ಯಾಂಕ್‌ನ ಎಲ್ಲಾ ಗ್ರಾಹಕರಿಗೆ ಎಟಿಎಂ ಹಾಗೂ ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಉಚ್ಚಿಲ ಪಡು ಶಾಖೆಯ 13, ಹೆಜಮಾಡಿ ಶಾಖೆಯ 25, ಮಲ್ಪೆ ಶಾಖೆಯ 27, ಗಂಗೊಳ್ಳಿ ಶಾಖೆಯ 8 ಸ್ವಸಹಾಯ ಗುಂಪುಗಳ ಸುಮಾರು 750 ಮಂದಿ ಸದಸ್ಯರಿಗೆ 2.5 ಕೋಟಿ ಮೊತ್ತದ ಚೆಕ್‌ಗಳನ್ನು ವಿತರಿಸಲಾಯಿತು.
ಬ್ಯಾಂಕ್‌ನ ಉಪಾಧ್ಯಕ್ಷ ಮಾಧವ ಪಿ. ಸುವರ್ಣ, ನಿರ್ದೇಶಕರುಗಳಾದ ಶಶಿಕಾಂತ್ ಪಡುಬಿದ್ರಿ, ಹೇಮನಾಥ ಜೆ. ಪುತ್ರನ್, ವೆಂಕಟರಮಣ ಎಚ್. ಕಿದಿಯೂರು, ರಾಮ ನಾಯ್ಕ್, ವಿನಯ ಕರ್ಕೇರ ಹಾಗೂ ಶಾಖಾ ಪ್ರಬಂಧಕರು ಉಪಸ್ಥಿತರಿದ್ದರು.