ಅಕ್ಟೋಬರ್ 13 ರಿಂದ16 ರವರೆಗೆ ದಕ್ಷಿಣ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ: ಲಾಂಛನ ಬಿಡುಗಡೆ

ಮಂಡ್ಯ: ಇಲ್ಲಿನ ಕೆಆರ್ ಪೇಟೆಯ ತ್ರಿವೇಣಿ ಸಂಗಮದಲ್ಲಿ ನಡೆಯಲಿರುವ ದಕ್ಷಿಣ ಭಾರತದ ಮಹಾಕುಂಭಮೇಳದ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಶುಕ್ರವಾರದಂದು ಬಿಡುಗಡೆಗೊಳಿಸಿದರು.

ಅಕ್ಟೋಬರ್ 13,14,15,16 ರಂದು ಕೆಆರ್ ಪೇಟೆಯ ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರದ ಕಾವೇರಿ-ಹೇಮಾವತಿ-ಲಕ್ಷ್ಮಣ ತೀರ್ಥಗಳ ಸಮಾಗಮವಾಗುವ ತ್ರಿವೇಣಿ ಸಂಗಮದಲ್ಲಿ ಮಹಾಕುಂಭಮೇಳ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿದಿನ ಗಂಗಾರತಿ, ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಮಹಾಕುಂಭಮೇಳದ ವಿಶೇಷ ಲಾಂಛನ ಸಿದ್ದಪಡಿಸಲಾಗಿದೆ. ಮಹಾಕುಂಭಮೇಳದ ಸಿದ್ದತೆ ಕುರಿತು ಬೊಮ್ಮಾಯಿಯವರು ಮಾಹಿತಿ ಪಡೆದುಕೊಂಡಿದ್ದಾರೆ. ಇದು ರಾಜ್ಯದ ಮಹತ್ವದ ಕಾರ್ಯಕ್ರಮವಾಗಿದೆ. ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಅಗತ್ಯವಿರುವ ಎಲ್ಲಾ ರೀತಿಯ ಸಿದ್ಧತೆ ಹಾಗೂ ವಿಶೇಷ ಕಾಳಜಿವಹಿಸಿ ಯಾವುದೇ ಸಮಸ್ಯೆಯಾಗದಂತೆ ವ್ಯವಸ್ಥೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.