ಮಧ್ಯಪ್ರದೇಶದಲ್ಲಿ ಕ್ಷೀಪ್ರ ರಾಜಕೀಯ ಬೆಳವಣಿಗೆ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ

ನವದೆಹಲಿ: ಮಧ್ಯಪ್ರದೇಶದ ಪ್ರಭಾವಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಇಂದು ಬಿಜೆಪಿ ಸೇರಿದ್ದಾರೆ.

ಮಧ್ಯಪ್ರದೇಶದಲ್ಲಿ ನಡೆದ ಕ್ಷೀಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಕಮಲ್ ನಾಥ್ ಸರ್ಕಾರ ಸಂಕಷ್ಟಕ್ಕೆ ಸಿಲುಕಿದ್ದು, ಅಧಿಕಾರ ಕಳೆದುಕೊಳ್ಳುವ ಆತಂಕದಲ್ಲಿದೆ. ಈ ನಡುವೆ ಸಿಂಧಿಯಾ ಬಿಜೆಪಿ ಸೇರ್ಪಡೆ ಕಾಂಗ್ರೆಸ್ ಗೆ ದೊಡ್ಡ ಹೊಡೆತ ನೀಡಿದೆ. ಸಿಂಧಿಯಾ ಬೆಂಬಲಿಗರೆಂದು ಎನ್ನಲಾದ 22 ಮಂದಿ‌ ಶಾಸಕರು ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಪತನದ ಅಂಚಿಗೆ ತಲುಪಿದೆ. ಶಾಸಕರ ಮನವೊಲಿಕೆ ಕಾರ್ಯ ಕಾಂಗ್ರೆಸ್ ಮುಖಂಡರಿಂದ ಮುಂದುವರಿದೆ.

ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದ ಸಿಂಧಿಯಾ, ಕಾಂಗ್ರೆಸ್ ಪಕ್ಷ ಮೊದಲಿನಂತಿಲ್ಲ.
ನಾನು ನೋವು ಮತ್ತು ಸಂಕಟ ಅನುಭವಿಸಿದ್ದೇನೆ. ನಾನು ಕಾಂಗ್ರೆಸ್ನಲ್ಲಿದ್ದಾಗ ಜನರ ಸೇವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ದೇಶದ ಅಭಿವೃದ್ಧಿ ಕಾರ್ಯಗಳ ಭಾಗವಾಗಲು ಈ ನಿರ್ಧಾರ ಕೈಗೊಂಡೆ ಎಂದಿದ್ದಾರೆ.