ಮಧುಕರ ಶೆಟ್ಟಿಯವರಿಗೆ ಕೇವಲ ಶಬ್ದಗಳಿಂದ ಶ್ರದ್ದಾಂಜಲಿ ಅರ್ಪಿಸಲು ಸಾಧ್ಯವಿಲ್ಲ :  ಅಜಯ್ ಕುಮಾರ್ ಸಿಂಗ್

ಕುಂದಾಪುರ: ದಕ್ಷ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮಧುಕರ ಶೆಟ್ಟಿಯವರಿಗೆ ಕೇವಲ ಶಬ್ದಗಳಿಂದ ಶ್ರದ್ದಾಂಜಲಿ ಅರ್ಪಿಸಲು ಸಾಧ್ಯವಿಲ್ಲ. ಅವರು ನನ್ನ ಹೃದಯಕ್ಕೆ ಹತ್ತಿರವಾಗಿದ್ದವರು. ದೇಶದ ಪೊಲೀಸ್ ವ್ಯವಸ್ಥೆಯ ಹೊಳೆಯುವ ನಕ್ಷತ್ರದಂತಿದ್ದರು, ಎಂದು ರಾಜ್ಯ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಹೇಳಿದರು.

ಕುಂದಾಪುರ ಸಮೀಪದ ಅಂಕದಕಟ್ಟೆಯ ಸಹನಾ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ ನಡೆದ ಡಾ.ಕೆ.ಮಧುಕರ ಶೆಟ್ಟಿ ಪ್ರಾರ್ಥನಾ ಸಭೆಯಲ್ಲಿ ಅವರು ಮಾತನಾಡಿದರು.

ಮಧುಕರ ಶೆಟ್ಟರ ಸಾವು ನಿಗೂಢ:                                                                 ಮಧುಕರ ಶೆಟ್ಟಿಯವರು ವೈದ್ಯಕೀಯ ವಿಜ್ಞಾನ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿದ್ದರು. ಅವರ ಆರೋಗ್ಯದ ಬಗ್ಗೆಯೂ ಅವರಿಗೆ ಕಾಳಜಿ ಇತ್ತು.  ಮಧುಕರ ಶೆಟ್ಟರ ಹಠಾತ್ ಸಾವು ಒಂದಷ್ಟು ನಿಗೂಢತೆಯನ್ನ ಉಳಿಸಿದ್ದು, ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿದೆ. ಮಧುಕರ ಶೆಟ್ಟರ ಸಾವಿಗೆ ಹೃದಯಾಘಾತ, ಎಚ್೧ಎನ್೧ ಮುಂತಾದ ಕಾರಣಗಳು ಜನರ ಬಾಯಿಯಲ್ಲಿ ಹರಿದಾಡುತ್ತಿದೆ. ಆದರೆ ಅವರ ಸಾವಿನ ನಿಜ ಕಾರಣ ತಿಳಿದುಕೊಳ್ಳಬೇಕು ಎನ್ನುವ ಕಾತರ ಎಲ್ಲರಿಗೂ ಇದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಅವರ ಸಾವಿನ ನೈಜ ಕಾರಣ ಬಯಲುಗೊಳಿಸಬೇಕು. ನಂಗೆ ವಿವಾದ ಮಾಡುವ ಉದ್ದೇಶ ನನಗಿಲ್ಲ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಪೊಲೀಸ್ ಕಾನ್‌ಸ್ಟೇಬಲ್ ಕಣ್ಣಲ್ಲಿ ಶೆಟ್ಟರ ನೆನಪು:

ಡಾ.ಮಧುಕರ್‌ಶೆಟ್ಟಿ ಸಾಹೇಬ್ರಲ್ಲಿ  ಆದರ್ಶ ಗುಣಗಳು ಇತ್ತು. ಯಾವುದೇ ಭೇದಭಾವವಿಲ್ಲದೆ ಒಬ್ಬ ಸಾಮಾನ್ಯ ಪೇದೆಯೊಂದಿಗೆ ಅವರು ಕುಳಿತುಕೊಂಡು ಊಟ ಮಾಡುತ್ತಿದ್ದರು. ನಾನು ಅವರಲ್ಲಿ ತಾಯಿ ಪ್ರೀತಿಯನ್ನು ನೋಡಿದ್ದೇನೆ ಎಂದು ಬೆಂಗಳೂರಿನ ಪೊಲೀಸ್ ಕಾನ್ಸ್‌ಟೇಬಲ್ ದಶರತ್ ಮಧುಕರ್ ಶೆಟ್ಟಿಯವರೊಂದಿಗಿನ ದಿನಗಳನ್ನು ನೆನೆದರು.

ಅರುಣ್ ಚಕ್ರವರ್ತಿ, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ, ಬೆಂಗಳೂರಿನ ಪೊಲೀಸ್ ಕಾನ್‌ಸ್ಟೇಬಲ್ ದಶರತ್, ದಯಾನಂದ, ಹಿರಿಯ ಪತ್ರಕರ್ತ ಪುಟ್ಟಸ್ವಾಮಿ, ವಿಜ್ಞಾನಿ ಮುತ್ತುರಾಮನ್, ಅನಿವಾಸಿ ಭಾರತೀಯ ಜಿಜಿಲ್ ರಾಮಕೃಷ್ಣ, ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಉಪನ್ಯಾಸಕರುಗಳಾದ ಮೌಲೇಶ್, ಪ್ರಮೋದ್ ಮುತಾಲಿಕ್, ಸುಬ್ಬಾ ರಾವ್, ಹಿರಿಯ ಐಪಿಎಸ್ ಅಧಿಕಾರಿ ದೀಪಿಕಾ ಸೂರಿ, ಎಡಿಜಿಪಿ ರವೀಂದ್ರನಾಥ್, ಬೆಂಗಳೂರಿನ ಕಾಲೇಜು ಸಹಪಾಠಿ ತಾರಕೇಶ್ವರ, ದೆಹಲಿಯ ಕಾಲೇಜು ಸಹಪಾಠಿ ಐವನ್ ಲೋಬೋ, ಹೆಚ್ಚುವರಿ ಎಸ್.ಪಿ ನಂದಿನಿ ನುಡಿ ನಮನ ಸಲ್ಲಿಸಿದರು.

ಸುವರ್ಣ ಮಧುಕರ ಶೆಟ್ಟಿ, ಪುತ್ರಿ ಸಮ್ಯ ಮಧುಕರ ಶೆಟ್ಟಿ, ಹಿರಿಯ ಸಹೋದರ ಮುರಳೀಧರ ಶೆಟ್ಟಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ,  ಉಡುಪಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಲಕ್ಷಣ ನಿಂಬರ್ಗಿ, ಹೆಚ್ಚುವರಿ ಎಸ್.ಪಿ ಕುಮಾರಚಂದ್ರ ಇದ್ದರು. ದಿನೇಶ್ ಅಮೀನ್ ಮಟ್ಟು ಹಾಗೂ ರಾಮಕೃಷ್ಣ ಪ್ರಸಾದ್ ನಿರೂಪಿಸಿದರು, ಕಿರಿಯ ಸಹೋದರ ಸುಧಾಕರ ಶೆಟ್ಟಿ ವಂದಿಸಿದರು.