ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಆರ್ ಮಾಧವನ್ ನಟಿಸಿ, ಚಿತ್ರಕಥೆ ಬರೆದು ನಿರ್ದೇಶಿಸಿರುವ ರಾಕೆಟ್ರಿ: ದ ನಂಬಿ ಎಫೆಕ್ಟ್ ಚಿತ್ರವು ಜುಲೈ 1ರಂದು ಬಿಡುಗಡೆ ಕಾಣುತ್ತಿದೆ. ಪ್ರಖ್ಯಾತ ವಿಜ್ಞಾನಿ ನಂಬಿ ನಾರಾಯಣನ್ ಬಯೋಪಿಕ್ ಇದಾಗಿದ್ದು, ಇದರಲ್ಲಿ ನಂಬಿ ನಾರಾಯಣನ್ ಅವರ ಪಾತ್ರವನ್ನು ಆರ್ ಮಾಧವನ್ ಮಾಡುತ್ತಿದ್ದಾರೆ.
ಈ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿರುವ ಮಾಧವನ್, ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ತನ್ನ ಹಲ್ಲುಗಳು ನಂಬಿ ನಾರಾಯಣನ್ ಅವರಂತೆ ಕಾಣಿಸಿಕೊಳ್ಳಬೇಕೆಂದು ತನ್ನ ದವಡೆಗಳನ್ನು ಮುರಿಸಿಕೊಂಡಿದ್ದೆ ಎಂದು ಇಂಡಿಯಾ ಟುಡೆ ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
“ನಾನು ಅವರಂತೆ ಕಾಣಲು ನನ್ನ ದವಡೆಯನ್ನು ಮುರಿಯಬೇಕಾಗಿತ್ತು. ಇದು ಒಂದೂವರೆ ವರ್ಷ ತೆಗೆದುಕೊಂಡಿತು. ಹಿಂದೆಂದೂ ಯಾರೂ ಮಾಡದ ಬಹಳಷ್ಟು ಕೆಲಸಗಳನ್ನು ನಾವು ಮೊದಲ ಬಾರಿಗೆ ಮಾಡಿದ್ದೇವೆ. ಇದೆಲ್ಲವೂ ಮೌಲ್ಯಯುತವಾಗಿತ್ತು. ನಾವು ಕೆಲವು ಹುಚ್ಚುತನದ ಸಂಗತಿಗಳನ್ನು ಮಾಡಿದ್ದೇವೆ” ಎಂದು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.
ಎಸ್. ನಂಬಿ ನಾರಾಯಣನ್ ಭಾರತೀಯ ಬಾಹ್ಯಾಕಾಶ ಇಂಜಿನಿಯರ್ ಆಗಿದ್ದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡಿದ್ದಾರೆ. ಭಾರತ ಉಡಾವಣೆ ಮಾಡಿದ ಮೊದಲ ಪಿ ಎಸ್ ಎಲ್ ವಿ ಗಾಗಿ ಬಳಸಲಾದ ವಿಕಾಸ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.ಭಾರತದ ಉಪಗ್ರಹಗಳನ್ನು ಉಡಾವಣೆ ಮಾಡಲು ಸ್ವದೇಶೀ ನಿರ್ಮಿತ ಕ್ರಯೋಜೆನಿಕ್ ಎಂಜಿನ್ ಗಳ ತಯಾರಿಯಲ್ಲಿ ನಿರತರಾಗಿದ್ದ ನಂಬಿ ಮೇಲೆ ಬೇಹುಗಾರಿಕೆಯ ಸುಳ್ಳು ಆರೋಪ ಹೊರಿಸಿ ಚಿತ್ರ ಹಿಂಸೆ ನೀಡಲಾಗಿತ್ತು. ಆದರೆ ಈ ಆರೋಪ ಸುಳ್ಳು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿ ಕೇರಳ ಸರಕಾರ 50,00,000 ರೂ ಪರಿಹಾರ ನೀಡುವಂತೆ 2018 ರಲ್ಲಿ ದೀಪಕ್ ಮಿಶ್ರ ಬೆಂಚ್ ಆದೇಶ ನೀಡಿತ್ತು.
ನಂಬಿ ನಾರಾಯಣನ್ ಅವರ ಜೀವನವನ್ನು ಆಧರಿಸಿ ರಾಕೆಟ್ರಿ: ದ ನಂಬಿ ಎಫೆಕ್ಟ್ ಅನ್ನುವ ಚಿತ್ರವನ್ನು ಆರ್ ಮಾಧವನ್ ನಿರ್ಮಿಸಿದ್ದು, ಜುಲೈ 1 ರಂದು ದೇಶಾದ್ಯಂತ ತೆರೆಕಾಣುತ್ತಿದೆ. ಇದು ನಿರ್ದೇಶಕನಾಗಿ ಆರ್ ಮಾಧವನ್ ಅವರ ಮೊದಲ ಚಿತ್ರವಾಗಿದೆ.
ಮೂಲ: ಇಂಡಿಯಾ ಟುಡೆ