ಬೆಂಗಳೂರು: ಪಂಡಿತ್ ನೆಹರು, ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರ ಹೆಸರಿನಲ್ಲಿ ನಾವು 3-4 ತಲೆಮಾರುಗಳಿಗಾಗುವಷ್ಟು ಸಂಪಾದಿಸಿದ್ದೇವೆ. ಈಗ ತ್ಯಾಗ ಮಾಡುವ ಸಮಯ ಬಂದಿದೆ. ಆ ಸಾಲವನ್ನು ತೀರಿಸಲು ನಾವು ಸಿದ್ಧರಿಲ್ಲದಿದ್ದರೆ, ನಾವು ತಿನ್ನುವ ಆಹಾರದಲ್ಲಿ ಹುಳುಗಳು ಬೀಳುತ್ತವೆ ಎಂದು ನಾನು ಹೆದರುತ್ತೇನೆ ಎಂದು ಸೋನಿಯಾ ಗಾಂಧಿ ವಿರುದ್ಧದ ಇಡಿ ಪ್ರಕರಣವನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಕಾಂಗ್ರೆಸ್ ಶಾಸಕ ಕೆ.ಆರ್. ರಮೇಶ್ ಕುಮಾರ್ ಹೇಳಿದ್ದಾರೆ.
ಗುರುವಾರದಂದು ಸೋನಿಯಾ ಗಾಂಧಿ ಇಡಿ ಮುಂದೆ ಹಾಜರಾಗಿದ್ದಾರೆ. ಸೋನಿಯಾ ಗಾಂಧಿ ವಿರುದ್ದ ಇಡಿ ವಿಚಾರಣೆಯನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದಾಗ ಶ್ರೀನಿವಾಸಪುರ ಶಾಸಕರ ಈ ಹೇಳಿಕೆ ಪಕ್ಷವನ್ನು ಮುಜುಗರಗೀಡು ಮಾಡಿದ್ದರೆ, ಆಡಳಿತ ಪಕ್ಷ ಬಿಜೆಪಿಗೆ ಕಾಂಗ್ರೆಸ್ ವಿರುದ್ದ ಹಾಯಲು ಮತ್ತೊಂದು ಕಾರಣ ನೀಡಿದೆ.
ರಾಜ್ಯ ಆರೋಗ್ಯ ಸಚಿವ ಸುಧಾಕರ್ ಕೆ ರಮೇಶ್ ಕುಮಾರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು “ಕಾಂಗ್ರೆಸ್ ಪಕ್ಷದ 60 ವರ್ಷಗಳ ಲೂಟ್ಇಂಡಿಯಾ ಕಾರ್ಯಕ್ರಮವನ್ನು ಬಹಳ ಸುಂದರವಾಗಿ ವಿವರಿಸಿದ ಅದ್ಭುತ ನಾಯಕನಿಗೆ ಅಭಿನಂದನೆಗಳು!” ಎಂದು ಟ್ವೀಟಿಸಿ ಕಾಲೆಳೆದಿದ್ದಾರೆ.
ಕಾಂಗ್ರೆಸ್ ಪಕ್ಷದ 60 ವರ್ಷಗಳ #LootIndia ಕಾರ್ಯಕ್ರಮವನ್ನ ಅತ್ಯಂತ ಸೊಗಸಾಗಿ ವರ್ಣಿಸಿದ ಮೇಧಾವಿ ನಾಯಕರಿಗೆ ಅಭಿನಂದನೆಗಳು!
ನಿಮ್ಮ ಪಕ್ಷದ ಹಿರಿಯ ನಾಯಕರೇ ಇಷ್ಟು ಪ್ರಾಮಾಣಿಕವಾಗಿ ಬ್ರಹ್ಮಾಂಡ ಭ್ರಷ್ಟಾಚಾರವನ್ನ ಒಪ್ಪಿಕೊಂಡಮೇಲೆ ಯಾವ ಮುಖ ಇಟ್ಟುಕೊಂಡು ಜನರ ಬಳಿ ಮತ ಕೇಳುತ್ತೀರಿ @INCIndia ನಾಯಕರೇ? pic.twitter.com/r0Kqt3OZpZ
— Dr Sudhakar K (@DrSudhakar_) July 21, 2022