ಉಡುಪಿ: ಮಾದಕ ದ್ರವ್ಯವನ್ನು ಯುವ ಸಮುದಾಯದ ಸಂಪೂರ್ಣವಾಗಿ ತಿರಸ್ಕರಿಸಬೇಕು. ಒಮ್ಮೆ ಇದರ ಚಟಕ್ಕೆ ದಾಸರಾದರೆ ಇಡೀ ಜೀವನವೇ ನರಕ ಆಗುತ್ತದೆ. ಕುತೂಹಲಕ್ಕಾಗಿ ಆರಂಭಿಸುವ ಮಾದಕ ವ್ಯಸನವೂ ಬಳಿಕ ಚಟವಾಗಿ ಮಾರ್ಪಾಡುತ್ತದೆ. ಅಪಾಯದ ದಾರಿಯಲ್ಲಿ ಸಾಗುವಂತೆ ಮಾಡಿ ಅಪರಾಧ ಚಟುವಟಿಕೆಗೆ ಇಳಿಸುವ ಈ ವ್ಯಸನದ ಕುರಿತು ಯುವಜನರಿಗೆ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಉಡುಪಿ ರಾಯಲ್ ಸಹಭಾಗಿತ್ವದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಪ್ರಯುಕ್ತ ಶನಿವಾರ ಮಣಿಪಾಲ ಕೆನರಾ ಮಾಲ್ನಲ್ಲಿ ಆಯೋಜಿಸಲಾದ ಸೆಲ್ಫಿ ವಿದ್ ಸಹಿ ಅಭಿಯಾನದಲ್ಲಿ ಅವರು ಮಾತನಾಡಿದರು.
ಅಭಿಯಾನಕ್ಕೆ ಚಾಲನೆ ನೀಡಿದ ತುಳು ಹಾಗೂ ಕನ್ನಡ ಚಿತ್ರನಟ ಪೃಥ್ವಿ ಅಂಬರ್ ಮಾತನಾಡಿ, ಕುತೂಹಲ ಹಾಗೂ ಮಾನಸಿಕ ಸಮಸ್ಯೆಯಿಂದಾಗಿ ಆರಂಭವಾಗುವ ಮಾದಕ ವ್ಯಸನ ಚಟವು ಮುಂದೆ ನಮ್ಮನ್ನು ದಾಸರನ್ನಾಗಿ ಮಾಡುತ್ತದೆ. ಇದರಿಂದಾಗಿ ಅಪರಾಧ ಚಟುವಟಿಕೆ, ಏಕಾಂಗಿತನ, ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಈ ಮೂಲಕ ನಮ್ಮ ಸಾಮಾಜಿಕ ಹಾಗೂ ಕೌಟುಂಬಿ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಮಾದಕ ವ್ಯಸನದಿಂದ ದೂರ ಉಳಿಯಬೇಕು ಎಂದು ಕರೆ ನೀಡಿದರು.
ಈಶ್ವರನಗರ ಆಯುರ್ವೇದ ಸೆಂಟರ್ನ ಡಾ. ರವಿರಾಜ್ ಭಂಡಾರಿ ಅವರು ಮಾತನಾಡಿ, ಮಾದಕ ವ್ಯಸನದ ದುಷ್ಪರಿಣಾಮ ಅರಿಯಿರಿ. ಯುವಜನತೆ ನಮ್ಮ ದೇಶದ ಸಂಪತ್ತು. ಆ ಸಂಪತ್ತನ್ನು ರಕ್ಷಿಸುವವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಒಂದು ಬಾರಿ ಮಾದಕದ್ರವ್ಯಗಳ ವ್ಯಸನಕ್ಕೆ ತುತ್ತಾದರೆ ನಂತರ ಅದರಿಂದ ಹೊರಬರುವುದು ತುಂಬಾ ಕಷ್ಟ. ಅದು ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಯಶವಂತ್, ಕೆನರಾ ಮಾಲ್ ಮ್ಯಾನೇಜರ್ ಪ್ರಕಾಶ್ ಕಾಮತ್, ದಿನೇಶ್ ಹೆಗ್ಡೆ ಆತ್ರಾಡಿ, ರೋಟರ್ಯಾಕ್ಟ್ ಕ್ಲಬ್ನ ಆಶೀರ್ ಉಪಸ್ಥಿತರಿದ್ದರು. ಉಡುಪಿ ಡಿವೈಎಸ್ಪಿ ಜೈಶಂಕರ್ ವಂದಿಸಿದರು. ಶಿವಾನಂದ ನಾಯರಿ ಕಾರ್ಯಕ್ರಮ ನಿರೂಪಿಸಿದರು.












