ಜಾನುವಾರುಗಳಲ್ಲಿ ಲುಂಪಿ ಚರ್ಮರೋಗ: ರೋಗ ಲಕ್ಷಣ ಇರುವ ರಾಸುಗಳನ್ನು ಪ್ರತ್ಯೇಕಿಸಿ ಕ್ವಾರಂಟೈನ್ ಗೆ ಪಶುವೈದ್ಯರ ಸೂಚನೆ

ಉಡುಪಿ: ಪಶು ಪಾಲನಾ ಇಲಾಖೆಯ ಮಾಹಿತಿಯಂತೆ ಲುಂಪಿ ಚರ್ಮ ರೋಗ (Lumpy Skin Disease)  ಇತ್ತೀಚಿನ ದಿನಗಳಲ್ಲಿ ಜಾನುವಾರುಗಳನ್ನು ಒಳಗೊಂಡು ಎಮ್ಮೆ ಮತ್ತು ಇತರೆ ಪ್ರಾಣಿಗಳಲ್ಲಿ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕು ಗಳಲ್ಲಿ ಕಂಡುಬಂದಿದ್ದು, ಇದು ಸೊಳ್ಳೆ, ನೊಣ ಮತ್ತು ಉಣ್ಣೆ ಕಡಿತಗಳಿಂದ ಹರಡುತ್ತದೆ.

ದನಗಳ ಚರ್ಮದ ಒಳಭಾಗದಲ್ಲಿ ವರ್ತುಲಾಕಾರದ ಗುಳ್ಳೆ, ಕನಿಷ್ಠ ಪ್ರಮಾಣದ ಜ್ವರ, ಹಾಲು ಇಳುವರಿ ಕಡಿಮೆ, ಆಹಾರ ಸೇವನೆಯಲ್ಲಿ ಕುಂಠಿತವಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಇಲಾಖಾ ಪಶು ವೈದ್ಯಾಧಿಕಾರಿಗಳು ಅಗತ್ಯವಿದ್ದಲ್ಲಿ ರೋಗ ಲಕ್ಷಣವಿರುವ ಜಾನುವಾರು ಮಾಲೀಕರ ಮನೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ನೀಡಲು ಸೂಚಿಸಲಾಗಿದೆ. ರೋಗ ನಿಯಂತ್ರಣಕ್ಕಾಗಿ ಹಟ್ಟಿಯ ಶುಚಿತ್ವ ಕಾಪಾಡುವುದು ಅವಶ್ಯಕವಾಗಿದೆ.

ರೋಗ ಹತೋಟಿ ಕ್ರಮಕ್ಕಾಗಿ  ಖಾಯಿಲೆ ಇರುವ ಜಾನುವಾರುಗಳನ್ನು ಬೇರೆಯೇ ಕಟ್ಟುವುದು. ಹೊರ ಪರೋಪ ಜೀವಿಗಳನ್ನು (ಉಣ್ಣೆ, ಸೊಳ್ಳೆ, ನೊಣ) ನಿಯಂತ್ರಿಸುವುದು. ರೋಗ ಪೀಡಿತ ಪ್ರಾಣಿಗಳ ಸಾಗಾಟ ನಿರ್ಬಂಧಿಸಬೇಕು.

ಅವಶ್ಯಕತೆ ಇದ್ದಲ್ಲಿ ರೋಗ ಪತ್ತೆಗಾಗಿ ಮಾದರಿಗಳನ್ನು ಇಲಾಖಾ ಪಶು ವೈದ್ಯಾಧಿಕಾರಿಗಳ ಮೂಲಕ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಕಳುಹಿಸುವುದು. ಹಟ್ಟಿಗೆ ಕ್ರಿಮಿನಾಶಕ ಸಿಂಪಡಿಸುವುದು.

ಕೃತಕ ಗರ್ಭಧಾರಣೆಗೆ ರೋಗ ಪೀಡಿತ ಹೋರಿಗಳ ವೀರ್ಯ ಉಪಯೋಗಿಸಬಾರದು. ರೈತರಿಗೆ ಈ ಕಾಯಿಲೆ ಬಗ್ಗೆ ಅರಿವು ಮೂಡಿಸುವ ಬಗ್ಗೆ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಗ್ರಾಮ ಸಭೆಗಳಲ್ಲಿ ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ವ್ಯಾಪ್ತಿಗಳಲ್ಲಿ ಮಾಹಿತಿ ನೀಡಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಕಸ್ಮಾತ್ ಮರಣ ಹೊಂದಿದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಹೊಂಡದಲ್ಲಿ ವೈಜ್ಞಾನಿಕವಾಗಿ ಹೂಳುವುದು ಅಗತ್ಯವಾಗಿರುತ್ತದೆ. ಎಂದು ಪಶು ಪಾಲನಾ ಇಲಾಖೆಯ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.