ಬೆಂಗಳೂರು: ಟೊಮೆಟೊ ಆ ಬಳಿಕ ಈರುಳ್ಳಿ ಇದೀಗ ಬೆಳ್ಳುಳ್ಳಿಗೂ ರಾಜಯೋಗ ಬಂದಿದೆ. ಬೆಳ್ಳುಳ್ಳಿ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕೆಲವೆಡೆ ಕಿಲೋ ಬೆಳ್ಳುಳ್ಳಿ 400 ರೂ. ತಲುಪಿದೆ
ತಲುಪಿದೆ. ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ಬೆಳೆಗಳು ಹಾನಿಗೀಡಾಗಿದ್ದು ಬೆಳ್ಳುಳ್ಳಿ ಬೆಲೆ ಏರಿಕೆಯತ್ತ ಸಾಗಿದೆ. ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆ ಏರಿಕೆ ಜಾರಿಯಲ್ಲಿರಲಿದೆ ಎಂದು ಅಂದಾಜಿಸಲಾಗಿದೆ.
ಕಳೆದ 6 ವಾರಗಳಿಂದ ಬೆಳ್ಳುಳ್ಳಿ ಬೆಲೆ ದುಪ್ಪಟ್ಟಾಗಿದೆ. ವರದಿಗಳ ಪ್ರಕಾರ ಚಿಲ್ಲರೆ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 180 ರಿಂದ 300 ರೂ. ಬೆಲೆ ನಿಗದಿಯಾಗಿದೆ. ಎಕನಾಮಿಕ್ಸ್ ಟೈಮ್ಸ್ ವರದಿಯ ಪ್ರಕಾರ ಸಗಟು ಮಾರುಕಟ್ಟೆಯಲ್ಲಿ ಕಿಲೋ ಬೆಳ್ಳುಳ್ಳಿಗೆ 130 ರೂ. ನಿಂದ 140 ರೂಪಾಯಿ ಇದೆ. ಗುಣಮಟ್ಟದ ಬೆಳ್ಳುಳ್ಳಿ ಬೆಲೆ 220 ರೂ.ನಿಂದ 250 ರೂ.ವರೆಗೆ ಏರಿದೆ. ಬೆಳ್ಳುಳ್ಳಿ ಪೂರೈಕೆ ಕಡಿಮೆ ಇರುವ ಕಡೆ ಸುಮಾರು 300 ರೂ. ನಿಂದ 400 ರೂ. ವರೆಗೂ ಮಾರಾಟವಾಗುತ್ತಿದೆ.
ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್ ಮುಂತಾದ ಬೆಳ್ಳುಳ್ಳಿ ಬೆಳೆಯುವ ಪ್ರದೇಶಗಳಲ್ಲಿ ಅಕಾಲಿಕ ಮಳೆ, ಬರ ಪರಿಸ್ಥಿತಿ ಮುಂತಾದ ಹವಾಮಾನ ವೈಪರೀತ್ಯಗಳಿಂದಾಗಿ ಬೆಳ್ಳುಳ್ಳಿ ಇಳುವರಿ ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ.












