ಪ್ರೀತಿಗೆ ಗಡಿಗಳಿಲ್ಲ! ಸಂಪಾಜೆಯಲ್ಲಿ ಹಿಂದೂ ಸಂಪ್ರದಾಯದಂತೆ ಅಮೆರಿಕನ್ ಯುವತಿಯ ಮದುವೆ

ಸುಳ್ಯ: ದೇಶ, ಭಾಷೆ ಮತ್ತು ಸಂಸ್ಕೃತಿಯ ಗಡಿಗಳನ್ನು ಮೀರಿ ಕೃಷ್ಣ ಭಕ್ತಿ ಇಬ್ಬರು ಯುವ ಹೃದಯಗಳನ್ನು ಒಂದಾಗಿಸಿದ ಅಪರೂಪದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆಯಲ್ಲಿ ನಡೆದಿದ್ದು, ಈ ಜೋಡಿಯ ಪ್ರೇಮಕಥೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆಯ ಬಿ.ಕೆ. ಕೇಶವ ಅವರ ಪುತ್ರ ಸಾಯಿ ಸಂಕೇತ್ ಹಾಗೂ ಅಮೆರಿಕದ ಚಿಕಾಗೋ ನಗರದ ಡಾ. ಚಾರ್ಲ್ಸ್ ಅವರ ಪುತ್ರಿ ಶಾನೋನ್ ಅವರು ಸಂಪಾಜೆಯ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದರು. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ವೈದಿಕ ಮಂತ್ರೋಚ್ಚಾರಗಳ ನಡುವೆ ವಿವಾಹ ನೆರವೇರಿತು.

ಮಡಿಕೇರಿ, ಮೈಸೂರು ಹಾಗೂ ಚೆನ್ನೈನ ಐಐಟಿಯಲ್ಲಿ ಶಿಕ್ಷಣ ಪಡೆದ ಸಾಯಿ ಸಂಕೇತ್, ನಂತರ ಪಶ್ಚಿಮ ಬಂಗಾಳದ ಮಾಯಾಪುರದಲ್ಲಿ ಅಗರಬತ್ತಿ ತಯಾರಿಕೆ ಮತ್ತು ರಫ್ತು ಉದ್ಯಮ ಆರಂಭಿಸಿದ್ದರು. ಇತ್ತ ಅಮೆರಿಕದಲ್ಲಿ ಶಿಕ್ಷಣ ಪೂರ್ಣಗೊಳಿಸಿದ ಶಾನೋನ್, ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿ ಭಾರತಕ್ಕೆ ಆಗಮಿಸಿದ್ದರು. ಆನ್‌ಲೈನ್ ವೃತ್ತಿಯ ಜೊತೆಗೆ ಕೃಷ್ಣ ಭಕ್ತಿಯ ಜೀವನಶೈಲಿಯನ್ನು ಅಳವಡಿಸಿಕೊಂಡಿದ್ದ ಅವರು, ಆಗಾಗ ಸಾಯಿ ಸಂಕೇತ್ ಅವರ ಉದ್ಯಮಕ್ಕೆ ಭೇಟಿ ನೀಡುತ್ತಿದ್ದ ವೇಳೆ ಪರಿಚಯ ಬೆಳೆದಿತ್ತು.

ಸ್ನೇಹದಿಂದ ಆರಂಭವಾದ ಈ ಪರಿಚಯ ಕ್ರಮೇಣ ಪ್ರೀತಿಯಾಗಿ ಅರಳಿ, ಸುಮಾರು ಎರಡು ವರ್ಷಗಳ ಕಾಲ ಪರಸ್ಪರ ಅರ್ಥಮಾಡಿಕೊಂಡ ಬಳಿಕ ಇಬ್ಬರೂ ವಿವಾಹವಾಗಲು ನಿರ್ಧರಿಸಿದರು. ಕೃಷ್ಣ ಭಕ್ತಿ, ಆಧ್ಯಾತ್ಮಿಕ ಚಿಂತನೆ ಹಾಗೂ ಜೀವನ ಮೌಲ್ಯಗಳು ಈ ಜೋಡಿಯನ್ನು ಮತ್ತಷ್ಟು ಹತ್ತಿರ ತಂದಿದ್ದು, ಅವರ ಸಂಬಂಧಕ್ಕೆ ಎರಡೂ ಕುಟುಂಬಗಳ ಸಂಪೂರ್ಣ ಬೆಂಬಲ ದೊರೆತಿದೆ.

ಆಷಾಢ ಮಾಸ ಆರಂಭಕ್ಕೂ ಮುನ್ನ ವಿವಾಹ ನೆರವೇರಿಸಬೇಕಿದ್ದ ಕಾರಣ, ಅಮೆರಿಕದಲ್ಲಿದ್ದ ಶಾನೋನ್ ಅವರ ಕುಟುಂಬದ ಎಲ್ಲ ಸದಸ್ಯರು ಮದುವೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆದರೆ ವಿವಾಹ ಸಮಾರಂಭದಲ್ಲಿ ಶಾನೋನ್ ಸಾಂಪ್ರದಾಯಿಕ ಭಾರತೀಯ ವಧುವಿನ ಉಡುಗೆಯಲ್ಲಿ ಕಂಗೊಳಿಸಿ ಎಲ್ಲರ ಗಮನ ಸೆಳೆದರು. ಅವರಿಗೆ ಅಲ್ಪಸ್ವಲ್ಪ ಕನ್ನಡವೂ ತಿಳಿದಿದ್ದು, ಕರ್ನಾಟಕದ ಆಹಾರ ಪದ್ಧತಿ ಮತ್ತು ಸಂಸ್ಕೃತಿಯ ಮೇಲೂ ವಿಶೇಷ ಅಭಿಮಾನವಿದೆ.

ವಿವಾಹದ ಬಳಿಕ ಮಾತನಾಡಿದ ಶಾನೋನ್, “ಭಾರತೀಯನನ್ನು ವಿವಾಹವಾಗಿರುವುದರಲ್ಲಿ ನನಗೆ ಹೆಮ್ಮೆ ಮತ್ತು ಸಂತೋಷವಿದೆ. ಇಲ್ಲಿನ ಸಂಸ್ಕೃತಿ ನನಗೆ ತುಂಬಾ ಇಷ್ಟವಾಗಿದೆ,” ಎಂದು ಸಂತಸ ಹಂಚಿಕೊಂಡರು. ಇತ್ತ ಸಾಯಿ ಸಂಕೇತ್, “ನಮ್ಮ ವಿವಾಹಕ್ಕೆ ಎರಡೂ ಕುಟುಂಬಗಳ ಸಂಪೂರ್ಣ ಬೆಂಬಲ ಸಿಕ್ಕಿದೆ. ಶಾನೋನ್ ಅವರ ಆಧ್ಯಾತ್ಮಿಕ ಒಲವು ಮತ್ತು ಭಾರತೀಯ ಸಂಸ್ಕೃತಿಯ ಮೇಲಿನ ಪ್ರೀತಿ ನನ್ನನ್ನು ಹೆಚ್ಚು ಆಕರ್ಷಿಸಿತು,” ಎಂದು ಹೇಳಿದರು.

ಎರಡು ದೇಶಗಳು, ಎರಡು ವಿಭಿನ್ನ ಹಿನ್ನೆಲೆಗಳು ಮತ್ತು ವಿಭಿನ್ನ ಸಂಸ್ಕೃತಿಗಳ ನಡುವೆಯೂ ಪರಸ್ಪರ ಗೌರವ, ಭಕ್ತಿ ಮತ್ತು ಜೀವನ ಮೌಲ್ಯಗಳು ಈ ಜೋಡಿಯನ್ನು ಒಂದಾಗಿಸಿವೆ. ಸಂಪಾಜೆಯಲ್ಲಿ ನಡೆದ ಈ ಅಪರೂಪದ ವಿವಾಹ, ‘ಪ್ರೀತಿಗೆ ಗಡಿಗಳಿಲ್ಲ; ಸಂಸ್ಕೃತಿಯನ್ನು ಮನಸಾರೆ ಅಪ್ಪಿಕೊಂಡರೆ ಜಗತ್ತೇ ಒಂದು ಕುಟುಂಬವಾಗುತ್ತದೆ’ ಎಂಬ ಸಂದೇಶವನ್ನು ಸಾರುವ ಸ್ಪೂರ್ತಿದಾಯಕ ಕಥೆಯಾಗಿದೆ.