ಅತಿವೇಗ – ಅಜಾಗರೂಕತೆಯ ಚಾಲನೆ- ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಕುಂದಾಪುರ ಸಂಚಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಇಲುಪ್ಪುರದ ಪಿಲ್ಲಾಪಾಳಾಯಂ ನಿವಾಸಿ ಬಾಲ ಮುರುಗನ್‌ ಎಂಬಾತನು TN-94-Z-3747 ಸಂಖ್ಯೆಯ ಲಾರಿಯನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ವೇಳೆ, ರಸ್ತೆಯ ಬಲಭಾಗದಲ್ಲಿ ಸಾಗುತ್ತಿದ್ದ ವಾಹನವನ್ನು ಎಡಭಾಗದಿಂದ ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ.

ಈ ವೇಳೆ ಅದೇ ದಿಕ್ಕಿನಲ್ಲಿ ರಸ್ತೆಯ ಎಡಭಾಗದಲ್ಲಿ ಸಂಚರಿಸುತ್ತಿದ್ದ ಭರತ್ ಶೆಟ್ಟಿ ಅವರ KA-20-ET-1646 ಸಂಖ್ಯೆಯ ಬೈಕ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದಾನೆ.

ಅಪಘಾತದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದ ಭರತ್ ಶೆಟ್ಟಿ ಅವರಿಗೆ ಎಡಕೈ, ಭುಜ, ಎದೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಕಿವಿ ಹಾಗೂ ಮೂಗಿನಿಂದ ರಕ್ತಸ್ರಾವವಾಗಿತ್ತು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ವೈದ್ಯರು ಮಧ್ಯಾಹ್ನ 1.30ಕ್ಕೆ ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಕುರಿತು ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಲಾರಿ ಚಾಲಕ ಬಾಲ ಮುರುಗನ್‌ನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.