ಭಾರತದಿಂದ ಬಾಂಗ್ಲಾವರೆಗೆ 3,200 ಕಿ.ಮೀ ಉದ್ದದ ‘ಗಂಗಾವಿಲಾಸ’: ವಿಶ್ವದ ಅತಿ ಉದ್ದದ ನೌಕಾ ವಿಹಾರಕ್ಕೆ ಚಾಲನೆ

ನವದೆಹಲಿ: ಭಾರತದ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣ. ವಿಶ್ವದಲ್ಲೇ ಅತಿ ಉದ್ದದ ನದಿಯ ಮೂಲಕದ ನೌಕಾ ವಿಹಾರ ‘ಗಂಗಾವಿಲಾಸ’ ಯೋಜನೆಗೆ ಜನವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

ಐಷಾರಾಮಿ ಕ್ರೂಸರ್ ಈ ವಾರ ತನ್ನ ಐತಿಹಾಸಿಕ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಭಾರತದ ಕೆಲವು ಪ್ರಸಿದ್ಧ ಸಾಂಸ್ಕೃತಿಕ ಮತ್ತು ಧಾರ್ಮಿಕ ತಾಣಗಳ ಮೂಲಕ ಸುತ್ತುತ್ತಾ 27 ನದಿಗಳನ್ನು ಒಳಗೊಳ್ಳುತ್ತಾ ಭಾರತದ ಕಾಶಿಯಿಂದ ಬಾಂಗ್ಲಾ ದೇಶದವರೆಗಿನ 3,200 ಕಿ.ಮೀ. ದೂರದ ಪ್ರಯಾಣವನ್ನು 51 ದಿನಗಳಲ್ಲಿ ಸಂಪೂರ್ಣಗೊಳಿಸಲಿದೆ.

ದಾರಿಯುದ್ದಕ್ಕೂ 50 ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಕ್ರೂಸ್ ವಾರಣಾಸಿಯ ಪ್ರಸಿದ್ಧ ಗಂಗಾ ಆರತಿ, ಬೌದ್ಧರು ಗೌರವಿಸುವ ಸ್ಥಳವಾದ ಸಾರನಾಥಕ್ಕೆ ಭೇಟಿ, ಅಸ್ಸಾಂನ ವೈಷ್ಣವ ಸಂಸ್ಕೃತಿಯ ಕೇಂದ್ರವಾದ ಮಜುಲಿ, ಸುಂದರಬನ್ಸ್ ಮತ್ತು ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಪ್ರವಾಸಗಳನ್ನು ಒಳಗೊಳ್ಳಲಿದೆ ಎಂದು ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ತಿಳಿಸಿದೆ.

ಕ್ರೂಸರ್ ಮೂರು ಡೆಕ್‌ಗಳು ಮತ್ತು 18 ಸೂಟ್‌ಗಳನ್ನು ಹೊಂದಿದ್ದು ಒಂದು ಬಾರಿಗೆ 36 ಪ್ರವಾಸಿಗರಿಗೆ ವಸತಿ ಕಲ್ಪಿಸುತ್ತದೆ. ಮೊದಲ ಬ್ಯಾಚ್ ಪ್ರವಾಸಿಗರು ಸ್ವಿಟ್ಜರ್ಲೆಂಡ್‌ನಿಂದ ಬರಲಿದ್ದಾರೆ.

ವಿಶ್ವದ ಅತಿ ಉದ್ದದ ನದಿಯಲ್ಲಿ 51 ದಿನಗಳ ಪ್ರಯಾಣಕ್ಕೆ ಸುಮಾರು 13 ಲಕ್ಷ ರೂಪಾಯಿ ವೆಚ್ಚವಾಗಲಿದೆ, ಪ್ರತಿ ರಾತ್ರಿಗೆ ಪ್ರತಿ ವ್ಯಕ್ತಿಗೆ ಸರಾಸರಿ 25,000 ರೂ ವೆಚ್ಚ ತಗಲಲಿದೆ.

62 ಮೀ ಉದ್ದದ ಶಿಪ್ ಮಾಲಿನ್ಯ ಮುಕ್ತ ವ್ಯವಸ್ಥೆ ಮತ್ತು ಶಬ್ದ ನಿಯಂತ್ರಣ ತಂತ್ರಜ್ಞಾನವನ್ನು ಹೊಂದಿದೆ. ಕೊಲ್ಕತ್ತಾ ಮೂಲದ ಅಂತರಾ ಲಕ್ಸುರಿ ರಿವರ್ ಕ್ರೂಸ್ ಎಂವಿ ಗಂಗಾವಿಲಾಸ್ ನ ಮಾಲಕತ್ವ ಹೊಂದಿದೆ.