ಉಡುಪಿ: ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಅವರು ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾವಣಾ ಪ್ರಚಾರದಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗದಂತೆ ಎಲ್ಲಾ ಪಕ್ಷಗಳು ಸ್ವಯಂ ರಕ್ಷಣೆ ವಹಿಸಬೇಕು. ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆಗಳಿಂದ ದೂರವಿರಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಬಹಿರಂಗ ಪ್ರಚಾರವಲ್ಲದೇ, ಮಾಧ್ಯಮಗಳ ಮೂಲಕ ನಡೆಸುವ ಚುನಾವಣಾ ಪ್ರಚಾರಗಳ ಮೇಲೂ ಚುನಾವಣಾ ಆಯೋಗ ತೀವ್ರ ನಿಗಾ ಇಟ್ಟಿದೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಮುನ್ನಚ್ಚರಿಕೆ ವಹಿಸಬೇಕು. ಯಾವುದೇ ಕಾರಣಕ್ಕೂ ಮಾಧ್ಯಮಗಳ ದುರುಪಯೋಗಕ್ಕೆ ಅವಕಾಶ ನೀಡಲಾಗದು ಎಂದು ಹೆಪ್ಸಿಬಾ ರಾಣಿ ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಚುನಾವಣಾ ತಹಶೀಲ್ದಾರ್ ಮುಹಮ್ಮದ್ ಇಸಾಕ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.