ಮೋದಿ ಮುಕ್ತವಾದರೆ ಪ್ರಜಾಪಭ್ರತ್ವದ ಉಳಿಯಲು ಸಾಧ್ಯ: ಬೋಜೇಗೌಡ

ಉಡುಪಿ:‌ ಮೋದಿ ಮುಕ್ತ ದೇಶ ಆದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ಕಳೆದ ಬಾರಿ ಮೋದಿ ಇದ್ದಷ್ಟು ಮೋದಿ ಅಲೆ, ಈ ಬಾರಿ ಇಲ್ಲ ಎಂದು ವಿಧಾನ ಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ಇಂದು ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷದಲ್ಲಿ ಸಂಸದೆ ಜನರ ನಿರೀಕ್ಷೆ ತಕ್ಕಂತೆ ಕೆಲಸ ಮಾಡಿದ್ದಾರ ಎಂಬುವುದನ್ನು ಜಿಲ್ಲೆಯ ಬುದ್ಧಿವಂತ ಮತದಾರರು ಅವಲೋಕನ ಮಾಡಬೇಕು. ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗೆ ಗೈರಾಗುವ ಮೂಲಕ ಜಿಲ್ಲೆ ಅಭಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸದವರು ಯಾವ ನೈತಿಕತೆಯಲ್ಲಿ ಮತ ಕೇಳುತ್ತೀರಾ ಎಂದು ಶೋಭಾಗೆ ಪ್ರಶ್ನಿಸಿದರು.
ದ.ಕ. ಜಿಲ್ಲೆಯಲ್ಲಿ ಹುಟ್ಟಿ ಬೆಳೆದ ವಿಜಯಬ್ಯಾಂಕ್ ಉಳಿವಿಗೆ ಸಂಸದರಾದ ನಳಿನ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ ಯಾವ ಪ್ರಯತ್ನವನ್ನು ಮಾಡಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರ ಪರವಾಗಿ ಕೆಲಸ ಮಾಡಲು ಇರುವ ಅವಕಾಶವನ್ನು ಬಳಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಟೀಕಿಸಿದರು.
ವಿಜಯ ಬ್ಯಾಂಕ್ ಲಾಭದಲ್ಲಿತ್ತು. ಅದಕ್ಕೆ ಆರ್ಥಿಕ  ಶಕ್ತಿ ತುಂಬುವ ಬದಲು ವಿಲೀನ ಮಾಡಿದ್ದಾರೆ. ಇದು ಎಷ್ಟು ಸರಿ ಎಂದು‌ ಪ್ರಶ್ನಿಸಿದರು. ಅಭಿವೃದ್ಧಿ ಕೆಲಸ ಮಾಡುವಲ್ಲಿ ಸಂಸದರು ವಿಫಲರಾಗಿದ್ದಾರೆ. ಆದ್ದರಿಂದ ಸ್ವಪಕ್ಷೀಯರೇ ಗೋ ಬ್ಯಾಕ್ ಎನ್ನುತ್ತಿದ್ದಾರೆ ಎಂದು ಟೀಕಿಸಿದರು.
ಮೈತ್ರಿ ಸರ್ಕಾರ ಬಜೆಟ್ ನಲ್ಲಿ ಮಲ್ಪೆಯ ಬಂದರ್ ಅಭಿವೃದ್ಧಿ ಗೆ 15ಕೋಟಿ ನೀಡಿದೆ. ಮೀನುಗಾರರ ಹಿತಾಸಕ್ತಿ ಕಾಪಾಡಲು ಬದ್ಧವಾಗಿದೆ.
ಸಂವಿಧಾನೀಕ ಸಂಸ್ಥೆಗಳ ದುರುಪಯೋಗ:
ಪ್ರಧಾನಿ ಮೋದಿ ಸಂವಿಧಾನದ ಅಡಿಯಲ್ಲಿ ಬರುವ ಸಂಸ್ಥೆಯನ್ನು ದುರುಪಯೋಗ ಮಾಡಿದ್ದಾರೆ. ಐಟಿ, ಸಿಬಿಐ ಸಂಸ್ಥೆಗಳನ್ನು ದುರ್ಬಳಕೆಮಾಡಿಕೊಂಡು ಜೆಡಿಎಸ್-ಕಾಂಗ್ರೆಸ್ ಮುಖಂಡರು, ಆಪ್ತರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ದೂರಿದರು.
ಯುಪಿಎ ಅವಧಿಯಲ್ಲಿ ಜಿಎಸ್ ಟಿ ತರಲು ಹೊರಟಾಗ ಆರ್ಥಿಕ ದಿವಾಳಿ ಆಗುತ್ತದೆಂದು‌ ಹೇಳಿದರು. ಈಗ ಜಿಎಸ್ ಟಿ ಆರ್ಥಿಕ ಕ್ರಾಂತಿ ಎನ್ನುತ್ತಿದ್ದಾರೆ ಎಂದು‌ ಲೇವಡಿ‌ ಮಾಡಿದರು.
ಯಾರೋ ಹುಟ್ಟಿಸಿದ ಮಕ್ಕಳಿಗೆ ಬಟ್ಟೆ ಹೊಲಿಸಿ ನಾಮಕರಣ ಮಾಡಿದರೆ ನಮ್ಮ ಮಕ್ಕಳಾಗಲ್ಲ. ಅದೇ ರೀತಿ ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳು ಬಿಜೆಪಿಯಾದ್ದು ಆಗಲ್ಲ ಎಂದು ವ್ಯಂಗ್ಯವಾಡಿದರು. ಸಮೀಕ್ಷೆಗಳಲ್ಲೆವೂ ನಿಜವಾಗಿಲ್ಲ. ಬಹಳಷ್ಟು ಸಾರಿ ಸಮೀಕ್ಷೆ ಸುಳ್ಳಾಗಿದೆ. ನಾನು ವಿಧಾನಪರಿಷತ್ತಿನ ಸದಸ್ಯನಾಗುತ್ತೇನೆಂದು ಯಾರು ಊಹಿಸಿರಲಿಲ್ಲ. ಯಾವ ಸಮೀಕ್ಷೆ ಯೂ ಹೇಳಿಲ್ಲ ಆದ್ರೂ ಜನ ನನ್ನನ್ನು ಗೆಲ್ಲಿಸಿದ್ರು ಎಂದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗೆ 50ರಿಂದ 60 ಸಾವಿರ ಲೀಡ್ ಬರುತ್ತದೆ. ಯಾರು ಊಹಿಸಲು ಆಗದ ಫಲಿತಾಂಶ ಬರುತ್ತದೆ. ಯುವಶಕ್ತಿ ಇನ್ನು ಮೋದಿ ಅಲೆಯಲ್ಲಿ ತೇಲುತ್ತಿದ್ದಾರೆ. ಅವರಿಗೆ ತಿಳುವಳಿಕೆ ಮೂಡಿಸುವಲ್ಲಿ ನಾವು ಇನ್ನು ಸಂಪೂರ್ಣ ಯಶಸ್ಸು ಆಗಿಲ್ಲ. ಜಿಲ್ಲೆಯಲ್ಲಿ ಪ್ರಬುದ್ಧ ಮತದಾರರು ಇದ್ದಾರೆ. ಈಗಾಗಲೇ ಜನರು ಯಾರಿಗೆ ಮತ ನೀಡಬೇಕೆಂದು ತೀರ್ಮಾನಿಸಿದ್ದಾರೆ. ನಾವು ಯಾರು ನಿರೀಕ್ಷೆ ಮಾಡದ ಫಲಿತಾಂಶವನ್ನು ತಂದುಕೊಡುತ್ತೇವೆ ಎಂದರು.
ಬ್ರಹ್ಮಾವರ ಸಕ್ಕರೆ ಬಗ್ಗೆ ಕಾಳಜಿ ಇದೆ. ಸ್ವಯತ್ತತೆ ಕೊಡುವುದು ಮಾತ್ರ ಮುಖ್ಯವಲ್ಲ. ಕಬ್ಬು ಬೆಳೆಯುವ ರೈತರು ಒಟ್ಟು ಇದ್ದಾರ ನೋಡಬೇಕು. ನೀರಾವರಿ ಇದೆಯೇ ನೋಡಬೇಕು. ಇನ್ನು ಕಾಲ ಮಿಂಚಿಲ್ಲ. ಬ್ರಹ್ಮಾವರ ವ್ಯಾಪ್ತಿಯ ರೈತರನ್ನು ಭೇಟಿ ಮಾಡಿ ಅವರ ಜೊತೆ ಸಭೆ ನಡೆಸಿ ಸ್ವತಃ ನಾನೇ ಅವರನ್ನು ಕರೆದುಕೊಂಡು ಮುಖ್ಯಮಂತ್ರಿ ಭೇಟಿ‌ಮಾಡಿಸುತ್ತೇನೆ ಎಂದರು.