ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಏಪ್ರಿಲ್ 18 ಮತದಾನ ನಡಯಲಿದ್ದು, ಮತದಾನ ನಡೆಯುವ 48 ಗಂಟೆಗಳ ಮುಂಚೆ (ಏಪ್ರಿಲ್ 17 ಮತ್ತು 18) ದಿನಪತ್ರಿಕೆ ಸೇರಿದಂತೆ ಯಾವುದೇ ಮುದ್ರಣ ಮಾಧ್ಯಮದಲ್ಲಿ, ರಾಜಕೀಯ ಪಕ್ಷಗಳು, ಮತ್ತು ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರ ಯಾವುದೇ ಸಂಸ್ಥೆ , ವ್ಯಕ್ತಿಗಳು ಜಾಹೀರಾತು ಪ್ರಕಟಿಸುವ ಮುನ್ನ, ಜಾಹೀರಾತಿನಲ್ಲಿನ ವಿಷಯಗಳ ಕುರಿತು ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿರುವ ಮಾದ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣೆ ಸಮಿತಿ(ಎಂಸಿಎಂಸಿ) ಯ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆದು ಪ್ರಕಟಿಸಬೇಕಾಗಿದೆ.
ಪೂರ್ವಾನುಮತಿ ಇಲ್ಲದೇ ಪ್ರಕಟಿಸಿದ ಜಾಹೀರಾತುಗಳ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಇಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಇಲ್ಲ. ಆದರೆ, ಏಪ್ರಿಲ್ 16ರಂದು ಸಂಜೆ 6 ಗಂಟೆಯಿಂದ ಏಪ್ರಿಲ್ 18ರ ಸಂಜೆ 6 ಗಂಟೆಯವರೆಗೆ ಟಿವಿ, ವೆಬ್ ಸೈಟ್ ಸೇರಿದಂತೆ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಹಾಗೂ ಫೇಸ್ ಬುಕ್, ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳಿಗೆ ಅಥವಾ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಮತಯಾಚನೆ ಸೇರಿದಂತೆ ಯಾವುದೇ ಚುನಾವಣಾ ಜಾಹೀರಾತುಗಳನ್ನು ಹಾಕುವುದನ್ನು ನಿಷೇಧಿಸಲಾಗಿದೆ. ಇಂತಹ ಜಾಹೀರಾತು ಅತವಾ ಸಂದೇಶ ಹಾಕುವವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಎಚ್ಚರಿಸಿದ್ದಾರೆ.