ಮನೆಯಲ್ಲಿ ಅಂಗವಿಕಲರು, ಹಿರಿಯ ನಾಗರೀಕರು ಇದ್ದಾರೆಯೇ, ಅವರನ್ನು ಮತಕೇಂದ್ರಕ್ಕೆ ಕರೆದುಕೊಂಡು ಹೋಗಿ ಮತದಾನ ಮಾಡಿಸಲು ತೊಂದರೆಯಿದೆಯೇ , ಚಿಂತೆ ಬಿಡಿ.. ಉಡುಪಿ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರ 1950 ಗೆ ಮಾಹಿತಿ ನೀಡಿ..
ಹೌದು.. ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯ ಪ್ರಯುಕ್ತ ಜಿಲ್ಲೆಯ ಎಲ್ಲಾ ಮತದಾರರು ಮತದಾನ ಮಾಡಲು ಅನುಕೂಲವಾಗುವಂತೆ ಜಿಲ್ಲಾಡಳಿತದವತಿಯಿಂದ ಪ್ರಾರಂಭಿಸಲಾಗಿರುವ ಮತದಾರರ ಸಹಾಯವಾಣಿ ಕೇಂದ್ರದ ಮೂಲಕ, ಸುಗಮ ಚುನಾವಣೆ ಮತ್ತು ಎಲ್ಲರೂ ಮತದಾನದಲ್ಲಿ ಭಾಗವಹಿಸಲು ಅಗತ್ಯವಿರುವ ನೆರವು ನೀಡಲಾಗುತ್ತಿದೆ.
ಮತದಾರರ ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ನಿಮ್ಮ ಸಮಸ್ಯೆ ಹೇಳಿದರೆ ಸಾಕು, ಅದನ್ನು ನೊಂದಣಿ ಮಾಡಿಕೊಂಡು ಸಂಬಂದಪಟ್ಟ ಅಧಿಕಾರಿಗಳ ಮೂಲಕ ತ್ವರಿತಗತಿಯಲ್ಲಿ ಅಗತ್ಯ ನೆರವು ನೀಡಲಾಗುತ್ತಿದೆ.
ಮನೆಯಲ್ಲಿನ ಹಿರಿಯ ನಾಗರೀಕರಿಗೆ ಮತದಾನದ ದಿನ ಮತಗಟ್ಟೆಗೆ ತೆರಳಲು ವಾಹನ ಸೌಲಭ್ಯ, ವೀಲ್ ಚೇರ್ ವ್ಯವಸ್ಥೆ, ಅಂಧ ಮತದಾರರಿಗೆ ಬೇಕಾದ ಸೌಲಭ್ಯಗಳು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಎಲ್ಲಿದೆ, ಯಾವ ಕ್ಷೇತ್ರ , ಯಾವ ಮತಗಟ್ಟೆ ಎಂಬ ಮಾಹಿತಿ ಸಹ ನಿಮಗೆ ಲಭ್ಯವಾಗಲಿದೆ.
ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಸಹಾಯವಾಣಿಯ ಮೂಲಕ 1327 ಕರೆ ಸ್ವೀಕರಿಸಿದ್ದು, ತಮ್ಮ ಮತಕೇಂದ್ರದ ಬಗ್ಗೆ ಮಾಹಿತಿ ಕೇಳಿ 317 ಮಂದಿ, ಹೊಸದಾಗಿ ಮತಪಟ್ಟಿಗೆ ಹೆಸರು ಸೇರಿಸಲು 433 ಮಂದಿ, ಮತಪಟ್ಟಯಲ್ಲಿ ಹೆಸರು ತೆಗೆಯುವ ಬಗ್ಗೆ 144 ಮಂದಿ , ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಗಾವಣೆಗೊಳ್ಳುವ ಬಗ್ಗೆ 229 ಮಂದಿ, ಮತದಾರರ ಪಟ್ಟಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು 140 ಮಂದಿ, 22 ದೂರುಗಳು, ನೇರವಾಗಿ ನೀಡಲಾಗಿರುವ 42 ದೂರುಗಳನ್ನು ಸ್ವೀಕರಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ ಸಹ ಸಾರ್ವಜನಿಕರು ದೂರು ನೀಡಬಹುದಾಗಿದ್ದು, ಈಗಾಗಲೇ ನೀತಿ ಸಂಹಿತೆ ಉಲ್ಲಂಘನೆ ಕುರಿತು ನೀಡಿರುವ ದೂರುಗಳ ಕುರಿತು ಕ್ರಮ ಕೈಗೊಳ್ಳಲಾಗಿದೆ.
ಸಹಾಯವಾಣಿ ಮೂಲಕ 24*7 ದೂರು ಸ್ವೀಕರಿಸಲಾಗುತ್ತಿದ್ದು, ಇದಕ್ಕಾಗಿ 3 ಪಾಳಿಯಲ್ಲಿ 6 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾವುದೇ ದಿನ ಯಾವುದೇ ಸಯಮದಲ್ಲಿ ಕರೆ ಮಾಡಿ ಸಹಾಯ ಪಡೆಯಬಹುದಾಗಿದೆ.