ಅಭಿವೃದ್ದಿಗೆ ಹಣ ಕೊಡಿ ಎಂದರೆ ಲಿಂಬು ಕೈಯ್ಯಲ್ಲಿಟ್ಟು ತಿರುಗುತ್ತಾರೆ. ರೇವಣ್ಣಗೆ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯ

ಕುಂದಾಪುರ: ಕಳೆದ ಒಂಭತ್ತು ತಿಂಗಳುಗಳಿಂದ ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಲೇ ದೋಸ್ತಿ ಸರ್ಕಾರ ಕಾಲಹರಣ ಮಾಡಿದೆ. ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಕ್ಷೇತ್ರದ ಅಭಿವೃದ್ದಿಗಾಗಿ ಹಣ ಬಿಡುಗಡೆ ಮಾಡಿ ಎಂದರೆ ಸಚಿವ ರೇವಣ್ಣನವರು ಬಲಗೈಲಿ ನಾಲ್ಕು, ಎಡಗೈಲಿ ನಾಲ್ಕು ಲಿಂಬೆ ಹಣ್ಣುಗಳನ್ನು ಇಟ್ಟುಕೊಂಡು ತಿರುಗಾಡುತ್ತಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದ್ದಾರೆ.
ಅವರು ಭಾನುವಾರ ಸಂಜೆ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನೆಂಪುವಿನಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರರವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಕುಡಿಯುವ ನೀರು, ರಸ್ತೆ ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಹಣ ಬಿಡುಗಡೆ ಮಾಡಿ ಎಂದರೆ ಪರಸ್ಪರ ಕಚ್ಚಾಟ ನಡೆಸುವ ಮೂಲಕ ದೋಸ್ತಿ ಸರ್ಕಾರ ಕಾಲ ಕಳೆಯುತ್ತಿದೆ. ಇದನ್ನೆಲ್ಲಾ ಗಮನಿಸಿದಾಗ ಸರ್ಕಾರ ಜೀವಂತವಾಗಿದೆಯಾ ಎಂದು ಪ್ರಶ್ನೆ ಮಾಡುವ ಅನಿವಾರ್ಯತೆ ಬಂದೊದಗಿದೆ ಎಂದು ಕೋಟ ದೋಸ್ತಿ ಸರ್ಕಾರದ ಕಾರ್ಯವೈಖರಿಯ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ಕೆಲ ತಿಂಗಳ ಹಿಂದೆ ಕರಾವಳಿಯ ಜನರನ್ನು ಸಿಎಂ ಕುಮಾರಸ್ವಾಮಿ ತಿಳುವಳಿಕೆ ಇಲ್ಲದವರು ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಆದರೆ ಇಂದು ಅದೇ ಜನರ ಬಳಿ ಮುಖ್ಯಮಂತ್ರಿ ಮತ ಕೆಳಲು ಬಂದಿದ್ದಾರೆ. ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಉಡುಪಿ ಪ್ರಥಮ ಸ್ಥಾನದಲ್ಲಿದೆ. ಉಡುಪಿ ಜಿಲ್ಲೆಯ ಜನರಿಗೆ ಬುದ್ದಿ ಇಲ್ಲವೆಂದು ಸಾರ್ವಜನಿಕವಾಗಿ ಹೇಳಿದ್ದು ಅಪಮಾನಕರ ಹೇಳಿಕೆ. ಆದ್ದರಿಂದ ಇಲ್ಲಿನ ಜನತೆ ಚುನಾವಣೆಯ ಮೂಲಕ ಜೆಡಿಎಸ್‍ಗೆ ಉತ್ತರ ಕೊಡುತ್ತಾರೆ. ನರೇಂದ್ರ ಮೋದಿಯವರು ಮತ್ತೆ ಈ ದೇಶದ ಚುಕ್ಕಾಣಿ ಹಿಡಿಯುತ್ತಾರೆ. ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ದೊಸ್ತಿ ಸರ್ಕಾರ ಉರುಳುತ್ತದೆ ಎಂದು ಕೋಟ ವಿಶ್ವಾಸ ವ್ಯಕ್ತಪಡಿಸಿದರು.