ಲೋಕಸಭಾ ಚುನಾವಣೆ- 144 ಸೆಕ್ಷನ್ ಜಾರಿ: ಹೆಪ್ಸಿಬಾ ರಾಣಿ

ಉಡುಪಿ: ಲೋಕಸಭಾ ಚುನಾವಣೆ 2019 ಕ್ಕೆ ಸಂಬಂದಿಸಿದಂತೆ, ಏಪ್ರಿಲ್ 18 ರಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ನಡೆಯಲಿದ್ದು, ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ, ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯನಮ್ನು ನಡೆಸುವ ನಿಟ್ಟಿನಲ್ಲಿ, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ , ಏಪ್ರಿಲ್ 16 ರಂದು  ಸಂಜೆ 6 ಗಂಟೆಯಿಂದ ಏಪ್ರಿಲ್ 19 ರ ಬೆಳಗ್ಗೆ 6 ಗಂಟೆಯವರೆಗೆ ಸೆಕ್ಷನ್ 144 ರಂತೆ ನಿಷೇದಾಜ್ಞೆ ವಿಧಿಸಿ , ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶಿಸಿದ್ದಾರೆ.

ಈ ಸಮಯದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ, ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ, ಸಮಾರಂಭ ನಡೆಸುವಂತಿಲ್ಲ, ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ , ಸ್ಥಳಗಳಲ್ಲಿ, ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ  5 ಅಥವಾ ಅದಕ್ಕಿಂತ ಹೆಚ್ಚು ಸೇರುವುದನ್ನು, ಗುಂಪುಗೂಡುವುದನ್ನು ನಿಷೇಧಿಸಿದೆ.

ನಿಷೇಧಾಜ್ಞೆ ಜಾರಿಯಾದ ಕೂಡಲೇ ಕ್ಷೇತ್ರದ ಮತದಾರರಲ್ಲದ  ರಾಜಕೀಯ ಪಕ್ಷಗಳ ಕಾರ್ಯಕರ್ತರು, ತಾರಾ ಪ್ರಚಾರಕರು ಮತ್ತು ಇತರೆ ಕಾರ್ಯಕರ್ತರು ಲೋಕಸಭಾ ಕ್ಷೇತ್ರ ಬಿಟ್ಟು ತೆರಳತಕ್ಕದ್ದು.

ಮತದಾನದ ದಿನ ಮತಗಟ್ಟೆಯಿಂದ 200 ಮೀ ಅಂತರದೊಳಗೆ ಯಾವುದೇ ಅಭ್ಯರ್ಥಿಗಳ ಚುನಾವಣಾ ಬೂತ್ ನ್ನು ರಚಿಸಲು ಅವಕಾಸ ಇರುವುದಿಲ್ಲ. 200 ಮೀ ಅಂತರದಲ್ಲಿ ಚುನಾವಣಾ ಆಯೋಗದ ನಿರ್ದೇಶನದನ್ವಯ 1 ಮೇಜು, 1 ಕುರ್ಚಿ, ಬಿಸಿಲು ಮಳೆಯಿಂದ ರಕ್ಷಣೆಗಾಗಿ ಸಣ್ಣ ಟರ್ಪಾಲುಗಳನ್ನು ಅಳವಡಿಸಿದ ಬೂತ್ ಗಳನ್ನು ಸ್ಥಳೀಯ ಆಡಳಿತದ ಪರವಾನಗಿ ಪಡೆದು ರಚಿಸಬಹುದಾಗಿದೆ.

ಮತಗಟ್ಟೆಯ 100 ಮೀ ಅಂತರದಲ್ಲಿ ಚುನಾವಣಾ ಪ್ರಚಾರ ಮಾಡುವುದನ್ನು ಹಾಗೂ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಮತದಾನದ ದಿನದಂದು ಪತ್ರಿಕಾ ಮಾಧ್ಯಮದವರು , ಮತದಾನದ ಗೌಪ್ಯತೆಗೆ ಧಕ್ಕೆ ಬರುವಂತೆ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.