ಬೆಂಗಳೂರು: ಇತ್ತೀಚಿಗೆ ಆಯೋಜಿಸಲಾದ ಲೋಕ ಅದಾಲತ್ಗಳಲ್ಲಿ 50 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ. ಕಲಘಟಗಿಯ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ಲೋಕ ಅದಾಲತ್ನಲ್ಲಿ 80 ವರ್ಷದ ಪತ್ನಿ ಮತ್ತು 85 ವರ್ಷದ ಪತಿ ರಾಜಿ ಮಾಡಿಕೊಂಡಿದ್ದಾರೆ. ಸಂಧಾನದ ನಂತರ, ಎರಡೂ ಪಕ್ಷಗಳು ಪುನರ್ಮಿಲನದ ಮೂಲಕ ವಿಷಯವನ್ನು ಇತ್ಯರ್ಥಪಡಿಸಿದವು.
ಒಟ್ಟಾರೆಯಾಗಿ 1,128 ವೈವಾಹಿಕ ವಿವಾದಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಸಮನ್ವಯದ ಕಾರಣದಿಂದಾಗಿ 107 ಜೋಡಿಗಳು ಮತ್ತೆ ಒಂದಾಗಿದ್ದಾವೆ ಎಂದು ರಾಷ್ಟ್ರೀಯ ಲೋಕ ಅದಾಲತ್ ನ ಮುಖ್ಯ ನ್ಯಾಯಾಧೀಶ ಜಸ್ಟೀಸ್ ವೀರಪ್ಪ ತಿಳಿಸಿದ್ದಾರೆ.
ರಾಜ್ಯದಲ್ಲಿ ನ್ಯಾಯಾಲಯಗಳಾದ್ಯಂತ ನಡೆದ ಲೋಕ ಅದಾಲತ್ಗಳಲ್ಲಿ ದಾಖಲೆಯ 7,65,077 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್ಎಲ್ಎಸ್ಎ) ಪ್ರಕಟಣೆಯಲ್ಲಿ ತಿಳಿಸಿದೆ.
ಹೈಕೋರ್ಟ್ನ 20 ಪೀಠಗಳು ಮತ್ತು ಜಿಲ್ಲಾ ನ್ಯಾಯಾಂಗದ 964 ಪೀಠಗಳಲ್ಲಿ ಜೂನ್ 25 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಸಲಾಯಿತು. ಇವುಗಳಲ್ಲಿ 2,64,464 ಬಾಕಿ ಇರುವ ಪ್ರಕರಣಗಳು ಮತ್ತು 5,00,613 ವ್ಯಾಜ್ಯ ಪೂರ್ವ ಪ್ರಕರಣಗಳ ವಿಲೇವಾರಿ ಸೇರಿವೆ. ಈ ಹಿಂದೆ ಅಕ್ಟೋಬರ್ 8, 2016 ರಲ್ಲಿ 6,16,715 ಪ್ರಕರಣಗಳು ಲೋಕ ಅದಾಲತ್ಗಳಿಂದ ಒಂದೇ ದಿನದಲ್ಲಿ ವಿಲೇವಾರಿಯಾಗಿತ್ತು.