ಉಡುಪಿ : ದೇಶದಾದ್ಯಂತ ಕೊರೊನ ಲಾಕ್ ಡೌನ್ ಮುಂದುವರಿದಿದ್ದರೆ ಇಲ್ಲೊಂದು ಅಪರೂಪದ ಮದುವೆ ನಡೆದಿದೆ . ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಸಂದೇಶ್ ಶೆಟ್ಟಿ ಹಾಗೂ ಬೆಳ್ತಂಗಡಿಯ ರಕ್ಷಿತಾ ಅವರ ವಿವಾಹವು ಸರಕಾರದ ನಿಯಮಗಳನ್ನು ಪಾಲಿಸಿಕೊಂಡು ಕಣಂಜಾರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂರ್ವ ನಿಗದಿತ ದಿನಾಂಕ ಎ. 12 ರಂದು ನಡೆಯಿತು.
ಆದರೆ ಮದುವೆ ಊಟ ಸವಿದಿದ್ದು ಬರೊಬ್ಬರಿ ನಾಲ್ಕುನೂರು ಹೆಚ್ಚು ಜನ, ಕೊರೊನದ ಲಾಕ್ಡೌನ್ ನಡುವೆ ಹಸಿದಿರುವ ವಲಸೆ ಕಾರ್ಮಿಕರು, ಅಸಂಘಟಿತ ವಲಯದ ಕೆಲಸಗಾರರು, ರಸ್ತೆ ಬದಿಯ ಅನಾಥರು , ಮನೆ ತಲುಪದೆ ನಿರಾಶ್ರಿತರು ಎಲ್ಲರಿಗೂ ಕೇಸರಿಬಾತ್ ಹಾಗೂ ಊಟವನ್ನು ಕರೋನ ಎಮರ್ಜೆನ್ಸಿ ತಂಡದವರು ಹಂಚಿದ್ದಾರೆ. .
ಮದುವೆಗೆಂದು ತೆಗೆದಿಟ್ಟ ಹಣ ಸಮಾಜಕ್ಕೆ ಕಾಣಿಕೆ ಕೊಟ್ಟು ಮಾನವೀಯತೆ ಮೆರೆದು ಹಸಿದವನ ಹೊಟ್ಟೆಗೆ ನೆರವಾಗಿದೆ ಈ ತಂಡ. ವರ ಸಂದೇಶ್ ಶೆಟ್ಟಿ ಸಾಮಾಜಿಕವಾಗಿ ತೊಡಗಿಸಿಕೊಂಡವರು. ಕರಾವಳಿ ಯೂತ್ ಕ್ಲಬ್ ನಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವವರು. ಈ ಸಂಘಟನೆಯಲ್ಲಿ ಅವಿಭಜಿತ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಗಳ ನೂರಕ್ಕೂ ಹೆಚ್ಚು ಸದಸ್ಯರುಗಳಿದ್ದಾರೆ .
ಕರಾವಳಿ ಯೂತ್ ಕ್ಲಬ್ ,ರಕ್ತದಾನ ,ಕಳೆದ ವರ್ಷದ ನೆರೆ ಭೂಕುಸಿತದ ನಡುವೆ ಪರಿಹಾರ ಕಾರ್ಯಗಳನ್ನು ನಿರ್ವಹಿಸುವುದರ ಜೊತೆ, ನೂರೈವತ್ತಕ್ಕು ಹೆಚ್ಚು ಬಡ ರೋಗಿಗಳಿಗೆ ಸಹಾಯ ಮಾಡುತ್ತಾ ಜಿಲ್ಲೆಯಾದ್ಯಂತ ಮನೆಮಾತಾಗಿದೆ. ಕೆ.ವೈ.ಸಿ ಸಂಸ್ಥೆಯ ಕಾರ್ಯದರ್ಶಿಯಾಗಿ ,ಹಾಗೂ ನೀರೆ ಬೈಲೂರು ಹಾಲು ಉತ್ಪಾದಕರ ಸಂಘದ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಸಂದೇಶ್. ಕೊರೋನಾ ಎಮರ್ಜೆನ್ಸಿ ಸಮಯದಲ್ಲಿ ಜಿಲ್ಲೆಯ ಮೂಲೆ ಮೂಲೆಗಳಲ್ಲಿ ಔಷಧಿಗಳನ್ನು ತಲುಪಿಸುವ ಕಾರ್ಯ ಕೂಡ ಈ ಸಂಘಟನೆ ಮಾಡುತ್ತಿದೆ. ಸರಳ ವಿವಾಹದ ಮೂಲಕ ಸಂದೇಶ್ ಶೆಟ್ಟಿ ಹಾಗೂ ರಕ್ಷಿತಾ ದಂಪತಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ.
– ರಾಮ್ ಅಜೆಕಾರು